

ಬೆಂಗಳೂರು: ಇತ್ತೀಚೆಗೆ ಶ್ರೀರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ನೀಡಿದ ಧರ್ಮ ಸಂದೇಶವನ್ನು ತಪ್ಪಾಗಿ ಗ್ರಹಿಸಿ ಕೆಲ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿರುವುದಕ್ಕೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ವಿಷಾಧ ವ್ಯಕ್ತಪಡಿಸಿದೆ.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಉದಾತ್ತ ಸಂದೇಶವನ್ನು ಜಗತ್ತಿಗೆ ನೀಡಿದ ವೀರಶೈವ ಲಿಂಗಾಯತ ಸಮುದಾಯವು ಸರ್ವ ಸಮಾಜವನ್ನು ಅಪ್ಪಿಕೊಂಡು, ಮುನ್ನಡೆಸಿಕೊಂಡು ಹೋಗುವ ವಿಶಾಲ ಭೂಮಿಕೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಸಂಘಟನೆಗಾಗಿ ಸದಾ ಶ್ರಮಿಸುತ್ತಿರುವ ಜಗದ್ಗುರು ಪಂಚಪೀಠಗಳು ಹಾಗೂ ಸಾವಿರಾರು ಶಾಖಾ ಮಠಗಳು ಎಲ್ಲ ಪ್ರಾಂತ್ಯಗಳಲ್ಲಿ ಧರ್ಮ-ಸಂಸ್ಕೃತಿ ಪ್ರಸಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ನೀಡಿದ ಧರ್ಮ ಸಂದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲ ಮಠಾಧೀಶರು ತಮ್ಮ ಅಸಮಾಧಾನವನ್ನು ಹೊರ ಹಾಕಿರುವುದು ಗಮನಕ್ಕೆ ಬಂದಿದೆ. ಸಮಾಜದಲ್ಲಿ ಸಂಕುಚಿತ ಭಾವನೆಗಳು ನಾಶವಾಗಿ, ವಿಶ್ವಭ್ರಾತೃತ್ವದ ವಿಶಾಲ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕೆಂಬ ಸದುದ್ಧೇಶವನ್ನು ಹೊರತು ಪಡಿಸಿ ಯಾವುದೇ ದುರುದ್ದೇಶದಿಂದಾಗಲಿ ಅಥವಾ ಯಾವುದೇ ಸಮುದಾಯದ ಆಂತರಿಕ ವಿಚಾರವನ್ನಾಗಲಿ ತಮ್ಮ ಸಂದೇಶದಲ್ಲಿ ಹೇಳಿಲ್ಲ ಎಂಬುದನ್ನು ಈಗಾಗಲೇ ಸ್ವತಃ ಶ್ರೀ ರಂಭಾಪುರಿ ಜಗದ್ಗುರುಗಳು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಉಂಟಾಗಿರುವ ತಪ್ಪು ಗ್ರಹಿಕೆಯನ್ನು ಯಾವುದೇ ಮಠಾಧೀಶರು ಇರಿಸಿಕೊಳ್ಳಬಾರದೆಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಸಿಂಧಗಿ ಸಾರಂಗ ಮಠದ ಶ್ರೀ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.