

ವಿಜಯವಾಣಿ ಸುದ್ದಿಜಾಲ ರೋಣ
ತಾಲೂಕಿನ ಮುಗಳಿ ಗ್ರಾಮದ ಜಮೀನುಗಳಲ್ಲಿ ಕಾಲುವೆಗಳನ್ನು ನಿರ್ಮಾಣ ಮಾಡದಿದ್ದರೂ ಉತಾರದಲ್ಲಿ ನೀರಾವರಿ ನಿಗಮ ಎಂದು ತಪ್ಪಾಗಿ ಭೋಜಾ ದಾಖಲಿಸಲಾಗಿದೆ. ಕೂಡಲೆ ಅದನ್ನು ಸರಿಪಡಿಸಬೇಕು ಎಂದು ಮುಗಳಿ ಗ್ರಾಮದ ರೈತರು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಪಟ್ಟಣದ ನೀರಾವರಿ ನಿಗಮದ ಎಇಇಗೆ ಗುರುವಾರ ಮನವಿ ಸಲ್ಲಿಸಿದರು.
ನೀಲವ್ವ ಉಸಲಕೊಪ್ಪದ ಮಾತನಾಡಿ, ನನ್ನ ಎರಡು ಎಕರೆ ಜಮೀನಿನಲ್ಲಿ ಯಾವುದೇ ಕೆನಾಲ್ ಹೋಗಿಲ್ಲ. ಆದರೂ ಮುಗಳಿ ಗ್ರಾಮದ ಸರ್ವೆ ನಂ. 52ರಲ್ಲಿರುವ ನನ್ನ 2 ಎಕರೆ ಜಮೀನಿನಲ್ಲಿ ಕರ್ನಾಟಕ ನೀರಾವರಿ ನಿಗಮದವರು ಎಂದು ಭೋಜಾ ಕೂರಿಸಿದ್ದಾರೆ. ಇದರಿಂದ ನನಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಅಲ್ಲದೆ, ಉತಾರದಲ್ಲಿ ಭೋಜಾ ಇರುವುದರಿಂದ ಬೆಳೆ ವಿಮೆ ಹಣ ಕೂಡ ಮರಳಿ ಹೋಗಿದೆ ಎಂದು ಅಧಿಕಾರಿ ಮುಂದೆ ಕಣ್ಣೀರಿಟ್ಟರು.
ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಭೀಮಣ್ಣಾ ಇಂಗಳೆ ಮಾತನಾಡಿ, ತಾಲೂಕಿನ 20 ಹಳ್ಳಿಗಳಲ್ಲಿ ನೀರಾವರಿ ನಿಗಮದಿಂದ ಮಲಪ್ರಭೆ ಬಲದಂಡೆ ಕಾಲುವೆ ನಿರ್ವಣವಾಗಿದ್ದು, ಪ್ರತಿ ಹಳ್ಳಿಗಳಲ್ಲಿಯೂ ಈ ರೀತಿಯ ಸಮಸ್ಯೆ ಇದೆ ಎಂದರು.
ನೀರಾವರಿ ನಿಮಗದ ಎಇಇ ಚಂದ್ರಹಾಸ ಬಂಡಿ ಮಾತನಾಡಿ, ಕೆನಾಲ್ ನಿರ್ವಣಕ್ಕೆ ರೈತರ ಜಮೀನು ವಶಪಡಿಸಿಕೊಳ್ಳುವುದು, ಅದರ ಮೇಲೆ ಭೋಜಾ ದಾಖಲಿಸುವುದು ವಿಶೇಷ ಭೂಸ್ವಾಧಿನಾಧಿಕಾರಿ ಜವಾಬ್ದಾರಿಯಾಗಿರುತ್ತದೆ. ಈ ಬಗ್ಗೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶೇಖಣ್ಣಾ ಕಡಿವಾಲ, ಶೃನಪ್ಪಾ ಜಿಗಳೂರ, ಹೊಳೆಯಪ್ಪಾ ಉಸುಲಕೊಪ್ಪ, ಇತರರು ಇದ್ದರು.