

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಓದುಬರಹ ಸುಧಾರಣೆ, ಎಸ್‌ಎಸ್‌ಎಲ್‌ಸಿ ಅನುತ್ತೀರ್ಣ ಪ್ರಮಾಣ ಕಡಿಮೆ ಮಾಡುವುದು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ರ‍್ಯಾಂಕ್ ಗಳಿಸುವ ಉದ್ದೇಶವನ್ನು ಮಿಶನ್ ವಿದ್ಯಾಕಾಶಿ ಹೊಂದಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಕೆ.ಇ. ಬೋರ್ಡ್ ಸಂಸ್ಥೆಯಲ್ಲಿ ಜಿಲ್ಲಾಡಳಿತದಿಂದ ಮಿಶನ್ ವಿದ್ಯಾಕಾಶಿ ಯೋಜನೆಯಡಿ ವಿವಿಧ ತಾಲೂಕುಗಳ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ನಮ್ಮ ಗುರಿ ನೂರರತ್ತ- ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 29,000 ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊ0ಡಿದ್ದಾರೆ. ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣ ಆಗುವಂತೆ ಅವರ ಕಲಿಕಾ ಗುಣಮಟ್ಟಕ್ಕೆ ಅನುಗುಣವಾಗಿ ಶಿಕ್ಷಕರಿಂದ ಪ್ರತ್ಯೇಕವಾಗಿ ಮತ್ತು ವಿಶೇಷ ಓದು ಬರಹ ಕಲಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಮಾತನಾಡಿ, ವೇಳಾಪಟ್ಟಿಗೆ ಅನುಗುಣವಾಗಿ ಏಕಾಗ್ರತೆ ಮತ್ತು ಯೋಜನಾಬದ್ಧವಾಗಿ ಪರೀಕ್ಷೆ ತಯಾರಿ ಮಾಡಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಗೆ ಇದು ಸಕಾಲವಾಗಿದ್ದು, ಪ್ರತಿದಿನ ವಿಷಯವಾರು ಪುನರ್ ಮನನ ಮಾಡಿಕೊಳ್ಳಬೇಕು ಎಂದರು.
ಕೆ.ಇ. ಬೋರ್ಡ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ರಾಜಪೂರೋಹಿತ, ಪಿಯು ಕಾಲೇಜ್ ಪ್ರಾಚಾರ್ಯ ಎನ್.ಎಸ್. ಗೋವಿಂದರಡ್ಡಿ ಪ್ರಾಸ್ತಾವಿಕವಾಗಿ ಮಾತಾಡಿದರು. ಡಿಡಿಪಿಐ ಎಸ್.ಎಸ್. ಕೆಳದಿಮಠ, ಬಿಇಒಗಳಾದ ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಶಿಕ್ಷಣಾಽಕಾರಿಗಳಾದ ಎಸ್.ಎಂ. ಹುಡೆದಮನಿ, ಎ.ಎ. ಖಾಜಿ, ನಾಫೀಸಾಬಾನು ದಾವಲಸಾಬನವರ, ಇತರರಿದ್ದರು. ರೇಣುಕಾ ಅಮಲಜೇರಿ ವಂದಿಸಿದರು.