

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರು ಕಾಳಜಿ ವಹಿಸಿ ಶಿಥಿಲಾವಸ್ಥೆಯಲ್ಲಿರುವ ನಿರ್ಗತಿಕರ ಮನೆಯನ್ನು ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಮಿಸುವುದು ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಸಾಮಾಜಿಕ ಅಭಿವೃದ್ಧಿಯೊಂದಿಗೆ ಆರ್ಥಿಕ ಸಬಲೀಕರಣ ಗ್ರಾಮಾಭಿವೃದ್ಧಿ ಯೋಜನೆಯ ಧ್ಯೇಯ ಎಂದು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್.ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಉಜಿರೆ ಗ್ರಾಮದ ಬಡೆಕೊಟ್ಟು ಎಂಬಲ್ಲಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸುಶೀಲಾ ಉಜಿರೆ ಗ್ರಾಮದ ಬಡೆಕೊಟ್ಟು ಎಂಬಲ್ಲಿ ಶಿಥಿಲಾವಸ್ಥೆಯ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಇವರಿಗೆ ಪಕೀರ ಎಂಬುವವರು ಮನೆ ನಿರ್ಮಾಣಕ್ಕೆ ಸ್ಥಳ ನೀಡಿದ್ದು, ಶೌರ್ಯ ತಂಡ ಮನೆ ನಿರ್ಮಾಣ ಕಾರ್ಯ ನಡೆಸಿಕೊಟ್ಟಿದೆ. ಮನೆ ಯಜಮಾನಿ ಸುಶೀಲಾ ಅವರಿಗೆ ಫಲಪುಷ್ಪ ನೀಡಿ ಗೃಹಪ್ರವೇಶ ಕಾರ್ಯಕ್ರಮ ನಡೆಸಲಾಯಿತು. ಪೂಜಾ ಸಮಿತಿಯ ಪ್ರಮುಖರು ಹಾಗೂ ಉದ್ಯಮಿ ಪ್ರಶಾಂತ್ ಜೈನ್, ಜನಜಾಗೃತಿ ವೇದಿಕೆ ವಲಯಾಧ್ಯಕ್ಷೆ ಪುಷ್ಪ್ಪಾವತಿ ಆರ್.ಶೆಟ್ಟಿ, ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ್ ಕುಲಾಲ್, ಜ್ಞಾನವಿಕಾಸ ಕಾರ್ಯಕ್ರಮ ನಿರ್ದೇಶಕ ವಿಠಲ್, ಒಕ್ಕೂಟದ ನಳಿನಿ, ವಿಜಯಾ, ಮನೆ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಪಕೀರ, ಶೌರ್ಯ ವಿಭಾಗದ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಿರೂಪಿಸಿದರು.
ಗ್ರಾಮಾಭಿವೃದ್ಧಿ ಯೋಜನೆ ವರ್ಷದಿಂದ ವರ್ಷಕ್ಕೆ ಹೊಸ ಕಾರ್ಯಕ್ರಮ ಅಳವಡಿಕೆಯಾಗುತ್ತಾ ಮುಂದುವರಿಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ 20 ಸಾವಿರ ಮಂದಿಗೆ ಮಾಸಾಶನ ನೀಡುತ್ತಾ ಬರಲಾಗುತ್ತಿದೆ. 50 ಸಾವಿರ ಮನೆಗಳಿಗೆ ಪರಿಕರ ವಿತರಣೆ ಮಾಡಲಾಗಿದೆ. ವಾತ್ಸಲ್ಯ ಕಾರ್ಯಕ್ರಮದಡಿ ಪ್ರಸಕ್ತ 575ನೇ ಮನೆ ನಿರ್ಮಾಣವಾಗುತ್ತಿದ್ದು, ಇಂದು 376ನೇ ಮನೆ ಹಸ್ತಾಂತರವಾಗಿದೆ. ರಾಜ್ಯದಲ್ಲಿ ಒಟ್ಟು ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ 1000 ಮನೆ ಮನೆಗಳನ್ನು ಗುರುತಿಸಲಾಗಿದೆ. ಅನಿಲ್ ಕುಮಾರ್, ಎಸ್.ಕೆ.ಡಿ.ಆರ್.ಪಿ. ಸಿಇಒ