ಬದಲಾದ ಪರೀಕ್ಷಾ ಪದ್ಧತಿಯಲ್ಲೇ ವಿದ್ಯಾರ್ಥಿಗಳಿಗೆ ತರಬೇತಿ ; ಎಸ್ಸೆಸ್ಸೆಲ್ಸಿ 2ನೇ ಸ್ಥಾನಕ್ಕೇರಲು ಮಿಷನ್-2

23 MDG 01 DDPI Office Photo
Published on

| ಮಾರುತಿ ಪ್ರಸನ್ನಕುಮಾರ್ ಮಧುಗಿರಿ

ಕಳೆದ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದು ಬೀಗಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಈ ಬಾರಿ ಮಿಷನ್ 2 ಧ್ಯೇಯದೊಂದಿಗೆ 2ನೇ ಸ್ಥಾನಕ್ಕೆ ಲಗ್ಗೆಯಿಡಲು ಎಲ್ಲ ತಯಾರಿ ಮಾಡಿಕೊಂಡಿದೆ. ಕರೊನಾದಿಂದ ಬದಲಾದ ಪರೀಕ್ಷಾ ಪದ್ಧತಿಯಲ್ಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಯಶಸ್ವಿಯಾಗಿದೆ.

ಶೈಕ್ಷಣಿಕ ಜಿಲ್ಲೆಯ ಮಧುಗಿರಿ, ಶಿರಾ, ಕೊರಟಗೆರೆ ಹಾಗೂ ಪಾವಗಡ ತಾಲೂಕಿನ ಒಟ್ಟು 12,206 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ನೂತನ ಪದ್ಧತಿಯಲ್ಲೇ ಪರೀಕ್ಷೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲಿಗೆ ಕರೊನಾ ಹಾವಳಿಯಿಂದ ಮನೆಯಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ದೀರ್ಘ ರಜೆಯ ಹಿನ್ನೆಲೆಯಲ್ಲಿ ಶಿಕ್ಷಣದಿಂದ ವಿಮುಖವಾಗಬಾರದು ಎಂಬ ಉದ್ದೇಶದಿಂದ ನುರಿತ ಶಿಕ್ಷಕರಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ೆನ್‌ಇನ್ ಹಾಗೂ ಜೂಮ್‌ಮೀಟ್, ಗೂಗಲ್ ಮೀಟ್ ಆನ್‌ಲೈನ್ ಮೂಲಕ ಸಂವಾದ ಆಯೋಜಿಸಿದಲ್ಲದೆ, ಪರೀಕ್ಷೆ ಎದುರಿಸುವುದು ಹೇಗೆ ಎಂಬುದರ ಜತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗಿದೆ. ನುರಿತ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ತರಬೇತಿ ನೀಡಲಾಗಿದೆೆ.

ಏನಿದು ಮಿಷನ್ 2 ಧ್ಯೇಯವಾಕ್ಯ: ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯಕ್ಕೆ 3ನೇ ಸ್ಥಾನಗಳಿಸಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಈ ಬಾರಿ 2ನೇ ಸ್ಥಾನಗಳಿಸಲು ಮಿಷನ್ 2 ಧ್ಯೇಯವಾಕ್ಯದ ಸಂಕಲ್ಪದೊಂದಿಗೆ ಸಕಲ ಸಿದ್ಧತೆಯಲ್ಲಿ ತೊಡಗಿದೆ. 2020-21ನೇ ಸಾಲಿನಲ್ಲಿ ಶೇ.100 ಫಲಿತಾಂಶ ಪಡೆಯುವುದರ ಜತೆಗೆ ರಾಜ್ಯಕ್ಕೆ 2ನೇ ಸ್ಥಾನಗಳಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಬೆಳಕು ಎಂಬ ವಿನೂತನ ಯೋಜನೆ ಜಾರಿಗೆ ತರಲಾಗಿದ್ದು, ಇದರ ಅನುಷ್ಠಾನಕ್ಕಾಗಿ ಮುಖ್ಯಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಪರೀಕ್ಷಾ ಪದ್ಧತಿ ಬದಲಾದ ಹಿನ್ನೆಲೆಯಲ್ಲಿ ಅಲ್ಪ ಅವಧಿಯಲ್ಲೇ ವಿದ್ಯಾರ್ಥಿಗಳಿಗೆ ನೂತನ ಪರೀಕ್ಷಾ ಪದ್ಧತಿ ಬಗ್ಗೆ ಆನ್‌ಲೈನ್ ಮೂಲಕ, ೆನ್‌ಇನ್ ಮೂಲಕ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲ ಗೊಂದಲಗಳನ್ನೂ ಪರಿಹರಿಸಲಾಗಿದೆ.

ಹೇಗಿರಲಿದೆ ಪರೀಕ್ಷೆ?: ನೂತನ ಪರೀಕ್ಷಾ ಪದ್ಧತಿಯಲ್ಲಿ ಒಟ್ಟು 6 ವಿಷಯಗಳಿಗೆ ಸಂಬಂಧಿಸಿದಂತೆ 2 ಪ್ರಶ್ನೆ ಪತ್ರಿಕೆಗಳಿರಲಿವೆ. ಪತ್ರಿಕೆ 1ರಲ್ಲಿ ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಒಟ್ಟು 120 ಅಂಕ ಒಳಗೊಂಡಿದ್ದು ಪ್ರಶ್ನೆಪತ್ರಿಕೆ 2ರಲ್ಲಿ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಪ್ರತೀ ವಿಷಯವು 40 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿದ್ದು, ನೇರ, ಸಂಕ್ಷಿಪ್ತ ಹಾಗೂ ಸರಳವಾಗಿರುತ್ತವೆ. ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಗಳಾಗಿರುವುದರಿಂದ ಉತ್ತರ ಪತ್ರಿಕೆಯು ಓಎಂಆರ್ ರೂಪದಲ್ಲಿರುತ್ತದೆ. ಈ ಎರಡೂ ಪ್ರಶ್ನೆ ಪತ್ರಿಕೆಗಳಿಗೆ 3 ಗಂಟೆ ಸಮಯ ನಿಗದಿ ಮಾಡಲಾಗಿದ್ದು, 2 ರಿಂದ 3 ದಿನಗಳ ಅಂತರವಿರುತ್ತದೆ. ಅಂಕಗಳನ್ನು ಎ+, ಎ, ಬಿ, ಸಿ ಗ್ರೇಡ್‌ಗಳಂತೆ ವರ್ಗೀಕರಿಸಲಾಗಿದ್ದು, 90-100 ಅಂಕಗಳಿಗೆ ಎ+ ಗ್ರೇಡ್, 80-89 ಅಂಕಗಳಿಗೆ ಎ ಗ್ರೇಡ್, 60-69 ಬಿ ಗ್ರೇಡ್ ಮತ್ತು 35-59 ಅಂಕಗಳಿಗೆ ಸಿ ಗ್ರೇಡ್ ನೀಡಲಾಗುತ್ತದೆ.

ಜಿಲ್ಲೆಯಲ್ಲಿ 220 ಪರೀಕ್ಷಾ ಕೇಂದ್ರ : 2020-21ನೇ ಸಾಲಿನಲ್ಲಿ ತುಮಕೂರು ಮತ್ತು ಮಧುಗಿರಿ 2 ಶೈಕ್ಷಣಿಕ ಜಿಲ್ಲೆಗಳಿಂದ ಒಟ್ಟು 220 ಪರೀಕ್ಷಾ ಕೇಂದ್ರಗಳಲ್ಲಿ 34,679 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತುಮಕೂರು ತಾಲೂಕಿನಲ್ಲಿ 53 ಪರೀಕ್ಷಾ ಕೇಂದ್ರಗಳಲ್ಲಿ 10,083 ವಿದ್ಯಾರ್ಥಿಗಳು, ಕುಣಿಗಲ್ ತಾಲೂಕಿನಲ್ಲಿ 17 ಪರೀಕ್ಷಾ ಕೇಂದ್ರಗಳಲ್ಲಿ 2856 ವಿದ್ಯಾರ್ಥಿಗಳು, ತಿಪಟೂರು ತಾಲೂಕಿನಲ್ಲಿ 14 ಪರೀಕ್ಷಾ ಕೇಂದ್ರಗಳಲ್ಲಿ 2866 ವಿದ್ಯಾರ್ಥಿಗಳು, ಗುಬ್ಬಿ ತಾಲೂಕಿನಲ್ಲಿ 22 ಪರೀಕ್ಷಾ ಕೇಂದ್ರಗಳಲ್ಲಿ 3293 ವಿದ್ಯಾರ್ಥಿಗಳು, ತುರುವೇಕೆರೆ ತಾಲೂಕಿನಲ್ಲಿ 15 ಪರೀಕ್ಷಾ ಕೇಂದ್ರಗಳಿಂದ 2037 ವಿದ್ಯಾರ್ಥಿಗಳು, ಮಧುಗಿರಿ ತಾಲೂಕಿನಲ್ಲಿ 22 ಪರೀಕ್ಷಾ ಕೇಂದ್ರಗಳಲ್ಲಿ 3391 ವಿದ್ಯಾರ್ಥಿಗಳು, ಪಾವಗಡ ತಾಲೂಕಿನಲ್ಲಿ 19 ಪರೀಕ್ಷಾ ಕೇಂದ್ರಗಳಿಂದ 2911 ವಿದ್ಯಾರ್ಥಿಗಳು, ಕೊರಟಗೆರೆ ತಾಲೂಕಿನಲ್ಲಿ 16 ಪರೀಕ್ಷಾ ಕೇಂದ್ರಗಳಲ್ಲಿ 2295 ವಿದ್ಯಾರ್ಥಿಗಳು, ಶಿರಾ ತಾಲೂಕಿನಲ್ಲಿ 24 ಪರೀಕ್ಷಾ ಕೇಂದ್ರಗಳಲ್ಲಿ 4389 ವಿದ್ಯಾರ್ಥಿಗಳು ನೂತನ ಪದ್ಧತಿಯಲ್ಲಿ ಪರೀಕ್ಷೆ ಎದುರಿಸಲಿದ್ದಾರೆ.

ಕಳೆದ ಬಾರಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ರಾಜ್ಯಕ್ಕೇ ಮಾದರಿಯಾಗಿದೆ. ಈ ಬಾರಿಯೂ ಮಿಷನ್ -2 ಧ್ಯೇಯದೊಂದಿಗೆ ಪರೀಕ್ಷೆ ಎದುರಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಬೆಳಕು ಎಂಬ ವಿನೂತನ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಗಳಿಂದ ಕೂಡಿರುವುದರಿಂದ ಈ ಮಾದರಿಯಲ್ಲೂ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳು ಯಶಸ್ಸು ಸಾಧಿಸುವ ಭರವಸೆಯಿದೆ. ಎಂ.ರೇವಣಸಿದ್ದಪ್ಪ, ಡಿಡಿಪಿಐ, ಮಧುಗಿರಿ ಶೈಕ್ಷಣಿಕ ಜಿಲ್ಲೆ ನೂತನ ಪರೀಕ್ಷಾ ಪದ್ಧತಿಯಂತೆ ಪರೀಕ್ಷೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇದರ ಬಗ್ಗೆ ಎಲ್ಲ ಮುಖ್ಯ ಶಿಕ್ಷಕರು, ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ನೂತನ ಪರೀಕ್ಷಾ ಪದ್ಧತಿ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಗೊಂದಲ ಹೋಗಲಾಡಿಸಲು ಶೈಕ್ಷಣಿಕ ಜಿಲ್ಲೆಯ ಶಿಕ್ಷಕರು ಶ್ರಮವಹಿಸಿದ್ದು, ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಮೊಬೈಲ್ ವಂಚಿತ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ ಅವರಿರುವ ಸ್ಥಳಕ್ಕೆ ತೆರಳಿ ಅವರಿಗೆ ಪರೀಕ್ಷೆಯ ಬಗ್ಗೆ ಮೂಡಿರುವ ಗೊಂದಲ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಸಿ.ನಂಜಯ್ಯ, ಡಿಡಿಪಿಐ, ತುಮಕೂರು ಶೈಕ್ಷಣಿಕ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net