

ಉಳ್ಳಾಲ: ಕೊಲ್ಯ ಕುಜುಮಗದ್ದೆ ಮನೆಯಿಂದ ನಾಪತ್ತೆಯಾಗಿದ್ದ ಅವಿವಾಹಿತ ಯುವಕ ಶವವಾಗಿ ಮನೆ ಸಮೀಪದ ಪಾಳು ಬಿದ್ದ ಬಾವಿಯಲ್ಲಿ ಪತ್ತೆಯಾಗಿದ್ದಾರೆೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯ ಕುಜುಮಗದ್ದೆ ನಿವಾಸಿ ಪ್ರಸಾದ್(44) ಮೃತಪಟ್ಟವರು. ಅವರು ಮೂಲತಃ ಜಪ್ಪು ಗೋರ್ದಡ್ಡು ನಿವಾಸಿಯಾಗಿದ್ದು, ಕೆಲವು ವರ್ಷಗಳಿಂದ ಕುಟುಂಬಸ್ಥರ ಜತೆ ಕುಜುಮಗದ್ದೆಯಲ್ಲಿ ವಾಸವಿದ್ದರು. ವೃತ್ತಿಯಲ್ಲಿ ಪೇಂಟರ್ ಆಗಿದ್ದ ಅವರು ಅವಿವಾಹಿತರಾಗಿದ್ದರು. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿದ್ದ ಅವರು, ಬಳಿಕ ಮೊಬೈಲ್ ಫೋನ್ ಬಿಟ್ಟು ಹೋಗಿದ್ದು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಈ ಬಗ್ಗೆ ಅವರ ಸಹೋದರ ರಾತ್ರಿ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶನಿವಾರ ಬೆಳಗ್ಗೆ ಮನೆಯವರು ಹಾಗೂ ನೆರೆಹೊರೆಯವರು ಹುಡುಕಾಟ ನಡೆಸಿದ್ದರು. ಈ ಸಂದರ್ಭ ಮನೆ ಸಮೀಪದ ಪಾಳು ಬಿದ್ದ ಬಾವಿಯ ಬಳಿ ಪ್ರಸಾದ್ ಅವರ ಪಾದರಕ್ಷೆ ಕಂಡು ಬಂದಿದ್ದು, ಬಾವಿಯೊಳಗೆ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹ ಮೇಲಕ್ಕೆತ್ತಿದ್ದಾರೆ. ಕೆಲವು ದಿನಗಳಿಂದ ಖಿನ್ನರಾಗಿದ್ದರು ಎನ್ನಲಾಗಿದ್ದು, ಈ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಂಕಿಸಲಾಗಿದೆ. ಮನೆಗೆ ಹಿರಿಯ ಮಗನಾಗಿದ್ದ ಅವರು ತಾಯಿ, ತಂದೆ, ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.