ನಾಪತ್ತೆಯಾಗಿದ್ದ ಯುವಕ ತ್ರಾಸಿಯಲ್ಲಿ ಪತ್ತೆ

gan (2)
Published on

ಕುಂದಾಪುರ: ಹರಿಯಾಣ ಯಮುನಾ ನಗರದಿಂದ ನಾಪತ್ತೆಯಾಗಿದ್ದ ಯುವಕನೋರ್ವನನ್ನು ಉಡುಪಿ ಜಿಲ್ಲೆ ಗಂಗೊಳ್ಳಿ ಠಾಣೆ ವ್ಯಾಪ್ತಿಯ ತ್ರಾಸಿ ಎಂಬಲ್ಲಿ ಗಂಗೊಳ್ಳಿ ಪೊಲೀಸರು ಸಾರ್ವಜನಿಕರ ಸಹಕಾರದಲ್ಲಿ ಪತ್ತೆ ಮಾಡಿ ಪಾಲಕರ ಸುಪರ್ದಿಗೆ ನೀಡಿದ್ದಾರೆ. ಹರಿಯಾಣ ಮೂಲದ ಶಿವಂ (22) ಎಂಬ ಯುವಕ ಇತ್ತೀಚೆಗೆ ಮನೆಯಿಂದ ಕಾಣೆಯಾಗಿದ್ದು, ಈ ಬಗ್ಗೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಶಿವಂ ರೈಲು ಹತ್ತಿದ್ದು ಈತ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ತ್ರಾಸಿಯ ಯುವಕರ ತಂಡವೂ ಇತ್ತು. ಶಿವಂ ಚಹರೆ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತ್ರಾಸಿಯಲ್ಲಿದ್ದ ಬಗ್ಗೆ ಖಚಿತ ವರ್ತಮಾನ ಪಡೆದು ಗಂಗೊಳ್ಳಿ ಠಾಣೆ ಪೊಲೀಸರು ವಿಚಾರಿಸಿ ಯುವಕನ ಪಾಲಕರಿಗೆ ಮಾಹಿತಿ ನೀಡಿದ್ದು, ಹರಿಯಾಣ ರಾಜ್ಯದಿಂದ ಆಗಮಿಸಿ ಗಂಗೊಳ್ಳಿ ಠಾಣೆಗೆ ಬಂದು ಮಗನನ್ನು ಕರೆದೊಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net