

ಕೊಲ್ಹಾರ: ಜಗತ್ತಿನಾದ್ಯಂತ ಜನರ ಕಣ್ಣು ಮಹಾಕುಂಭಮೇಳ ಮೇಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಯಾತ್ರಾರ್ಥಿಗಳು ಭಕ್ತಿಯಲ್ಲಿ ಮಿಂದೇಳುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ 24 ವರ್ಷದ ಹಿಂದೆ ಕಾಣೆಯಾಗಿದ್ದ ಯುವಕನೊಬ್ಬ ಮೇಳಕ್ಕೆ ಹೋಗಿದ್ದ ತಾಲೂಕಿನ ಬಳೂತಿಯ ಯಾತ್ರಾರ್ಥಿಗಳಿಗೆ ವಾರಾಣಸಿಯಲ್ಲಿ ಪತ್ತೆಯಾಗಿರುವುದು ಗ್ರಾಮದಲ್ಲಿ ಸಂಭ್ರಮ ಉಂಟು ಮಾಡಿದೆ.
16 ವರ್ಷದ ಬಾಲಕನಿದ್ದಾಗ 2001 ರಲ್ಲಿ ಊರು ತೊರೆದಿದ್ದ ಬಳೂತಿ ಗ್ರಾಮದ ರಮೇಶ ದುಂಡಪ್ಪ ಚೌಧರಿ ವಾರಾಣಸಿಯಲ್ಲಿ ಪತ್ತೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಬಳೂತಿ ಗ್ರಾಮದ ಮಲ್ಲಿಕಾರ್ಜುನ ಪಾಟೀಲ ಅವರು ಸ್ನೇಹಿತರೊಡನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳದಲ್ಲಿ ಪಾಲ್ಗೊಂಡು ವಾಪಸ್ ಬರುತ್ತಿರುವಾಗ ವಾರಾಣಸಿಯಲ್ಲಿ ಸನ್ಯಾಸಿ ವೇಷದಲ್ಲಿದ್ದ ವ್ಯಕ್ತಿಯನ್ನು ಗಮನಿಸಿ ಆತ ತಮ್ಮೂರಿನವನೇ ಎಂದು ಗುರುತು ಹಿಡಿದಿದ್ದಾರೆ.
ಅತನನ್ನು ಮಾತನಾಡಿಸಲು ಹೋದಾಗ ಆರಂಭದಲ್ಲಿ ಅವರ ಜತೆ ಸರಿಯಾಗಿ ವ ರ್ತಿಸಿಲ್ಲ. ಕನ್ನಡ ಬದಲಾಗಿ ಹಿಂದಿಯಲ್ಲಿ ಮಾತನಾಡಿ ತನ್ನ ಗುರುತನ್ನು ಬಿಟ್ಟುಕೊಂಡಲು ಹಿಂದೇಟು ಹಾಕಿದ್ದಾನೆ. ನಂತರ ಹಿಂದಿಯಲ್ಲೇ ಆತನ ಜತೆ ಸಂವಹನ ನಡೆಸಿ ತಮಗೆ ಪತ್ತೆಯಾದ ವ್ಯಕ್ತಿ ತಮ್ಮೂರಿನವನು ಎನ್ನುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಊರಿನಲ್ಲಿರುವ ಯುವಕನ ಸಂಬಂಧಿಕರಿಗೆ ವಿಷಯ ತಿಳಿಸಿ ಮಲ್ಲಿಕಾರ್ಜುನ ಪಾಟೀಲ ತಮ್ಮ ವಾಹನದಲ್ಲೇ ಬಳೂತಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ.
24 ವರ್ಷದ ನಂತರ ಗ್ರಾಮಕ್ಕೆ ಮರಳಿರುವ ರಮೇಶನನ್ನು ನೋಡಲು ಗ್ರಾಮಸ್ಥರು ತಂಡೋಪತಂಡವಾಗಿ ಅವರ ತೆರಳುತ್ತಿರುವುದು ಮಂಗಳವಾರ ಕಂಡು ಬಂದಿತು. 2001 ರಲ್ಲಿ ಊರು ತೊರೆದಿದ್ದ ರಮೇಶ ದುಂಡಪ್ಪ ಚೌಧರಿ, ದೇಶದ ವಿವಿಧೆಡೆ ಸಂಚರಿಸಿ ಇತ್ತೀಚಿನ ಹಲವು ವರ್ಷಗಳಿಂದ ಸನ್ಯಾಸ ವೇಷ ಧರಿಸಿ ಈಗ ವಾರಾಣಸಿಯಲ್ಲಿ ನೆಲೆಸಿದ್ದರು. ಮಗನ ಪತ್ತೆಗಾಗಿ ಪಾಲಕರು ಸಾಕಷ್ಟು ಪ್ರಯತ್ನ ನಡೆಸಿದರೂ ಫಲ ಸಿಕ್ಕಿರಲಿಲ್ಲ. ಮಗನ ನಾಪತ್ತೆಗೆ ಮರಗಿಯೇ ಅವರು ಜೀವ ಕಳೆದುಕೊಂಡರು. ಈಗ ಅವರ ಮಗ ಪತ್ತೆಯಾದರೂ ಪಾಲಕರೇ ಇಲ್ಲ ಎಂಬ ನೋವು ಗ್ರಾಮಸ್ಥರನ್ನು ಕಾಡುತ್ತಿದೆ.
ನಮ್ಮೂರಿನ ರಮೇಶ ಚೌಧರಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸನ್ಯಾಸಿಯ ವೇಷದಲ್ಲಿದ್ದ. ಆತನನ್ನು ಗುರುತಿಸಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದೆ. ನಮ್ಮ ವಾಹನದಲ್ಲೇ ಬಳೂತಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದೇವೆ. ಮಲ್ಲಿಕಾರ್ಜುನ ಪಾಟೀಲ,ಬಳೂತಿ ಗ್ರಾಮದ ನಿವಾಸಿ