

ಉಡುಪಿ: ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಉಗ್ಗೇಲುಬೆಟ್ಟು ಮಡಿಸಾಲು ಹೊಳೆಯಲ್ಲಿ ಮಂಗಳವಾರ ಮಧ್ಯಾಹ್ನ ಈಜಲು ಹೋಗಿ ನೀರು ಪಾಲಾಗಿದ್ದ ಅನಾಸ್(16), ಶ್ರೇಯಸ್ (18) ಮೃತದೇಹ ಬುಧವಾರ ಪತ್ತೆಯಾಗಿದೆ.
ಮಂಗಳವಾರ ಮೂವರು ಸ್ನೇಹಿತರು ಈಜಲು ನದಿಯಲ್ಲಿ ನೀರಿಗೆ ಇಳಿದಿದ್ದು, ಇಬ್ಬರು ನೀರು ಪಾಲಾಗಿದ್ದರು. ಇದನ್ನು ಕಂಡು ಹೆದರಿದ ಸಂಜಯ್‌ರಾಜ್ ಮನೆಗೆ ಬಂದು ಯಾರಿಗೂ ವಿಷಯ ತಿಳಿಸಿರಲಿಲ್ಲ.
ಮಧ್ಯಾಹ್ನ ಆಡಲು ಹೋಗಿದ್ದ ಶ್ರೇಯಸ್ ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ತಂದೆ ಉದಯ ಕುಮಾರ್ ಮಗನ ಬಗ್ಗೆ ಸ್ನೇಹಿತರ ಬಳಿ ವಿಚಾರಿಸಿದ್ದಾರೆ. ಆದರೆ ಈ ವೇಳೆ ಸಂಜಯ್ ಮಾಹಿತಿ ನೀಡಿರಲಿಲ್ಲ. ಸ್ಥಳೀಯರೊಬ್ಬರು ರಾತ್ರಿ 9.30ರ ವೇಳೆಗೆ ಉಗ್ಗೇಲ್ಬೆಟ್ಟು ಮಡಿಸಾಲು ಹೊಳೆಯಲ್ಲಿರುವ ರೈಲ್ವೇ ಬ್ರಿಜ್‌ನ ಪಿಲ್ಲರ್ ಪುಟ್ಟಿಂಗ್ ಮೇಲೆ ಒಂದು ಬ್ಯಾಗ್, 2 ಜತೆ ಚಪ್ಪಲಿ, ಮೊಬೈಲ್ ರಿಂಗಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸಂಜಯ್‌ರಾಜ್ ನಲ್ಲಿ ಕೂಲಂಕಷವಾಗಿ ಕೇಳಿದಾಗ ಸತ್ಯ ವಿಚಾರ ತಿಳಿಸಿದ್ದು, ಅದರಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಈಜುಪಟುಗಳನ್ನು ಕರೆಸಿ ಸ್ವರ್ಣಾ ನದಿಯಲ್ಲಿ ಹುಡುಕಾಟ ಆರಂಭಿಸಿದ್ದರು. ಆದರೆ ನಾಪತ್ತೆಯಾದವರು ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ ಇಬ್ಬರ ಮೃತದೇಹ ನದಿಯಲ್ಲಿ ಕಂಡುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.