ಸ್ನಾನಕ್ಕೆ ನದಿಗಿಳಿದ ಮೂವರು ನಾಪತ್ತೆ

web
Published on

ಶಿರ್ವ: ಕಾಪು ತಾಲೂಕಿನ ಪಾಂಬೂರು ಎಂಬಲ್ಲಿ ಭಾನುವಾರ ಕೆಲಸ ಮುಗಿಸಿ ಕೈಕಾಲು ತೊಳೆಯಲು ನದಿಗೆ ಇಳಿದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಶಂಕರಪುರ ನಿವಾಸಿ ಕೆಲ್ವಿನ್(21), ಕಟಪಾಡಿ ಸರ್ಕಾರಿ ಗುಡ್ಡೆ ನಿವಾಸಿಗಳಾದ ರಿಜ್ವಾನ್(18), ಜಾಬೀರ್(19) ಮೃತಪಟ್ಟವರು.
ಪಾಂಬೂರಿನಲ್ಲಿ ಮನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಐವರು ಯುವಕರು ಭಾನುವಾರ ಸಾಯಂಕಾಲ ಕೆಲಸ ಮುಗಿಸಿ ಸಮೀಪದ ಪಾಪನಾಶಿನಿ ನದಿಗೆ ಕೈ ಕಾಲು ತೊಳೆಯಲು ಇಳಿದರು. ಈ ಸಂದರ್ಭ ನದಿಯಲ್ಲಿ ಆಳದ ಅಂದಾಜಿಲ್ಲದೆ ಮುಂದಕ್ಕೆ ತೆರಳುತ್ತಿದ್ದ ಯುವಕ ಮುಳುಗಿದ್ದು, ಆತನನ್ನು ರಕ್ಷಿಸಲು ಧಾವಿಸಿದ ಇನ್ನಿಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮಲ್ಪೆ ಮುಳುಗು ತಜ್ಞ ಈಶ್ವರ್ ನೀರಿಗೆ ಇಳಿದು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಅಜ್ಜರಕಾಡು ಆಸ್ಪತ್ರೆಗೆ ರವಾನಿಸಲಾಗಿದೆ.
ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರ್ವ ಠಾಣಾ ಪೊಲೀಸ್ ಹಾಗೂ ಉಡುಪಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವಗಳ ಹುಡುಕಾಟದಲ್ಲಿ ಸ್ಥಳೀಯರಿಗೆ ನೆರವಾದರು. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net