ನಾಪತ್ತೆಯಾಗಿದ್ದ ಯುವತಿ ಪತ್ತೆ

Girl
Published on

ಉಡುಪಿ: ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಾಪತ್ತೆಯಾಗಿದ್ದ ಹಿಂದು ಯುವತಿ ಮುಸ್ಲಿಂ ಯುವಕನೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾಳೆ.

ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಲ್ಪೆ ಪೊಲೀಸರು ಚುರುಕು ಕಾರ್ಯಾಚರಣೆ ನಡೆಸಿ ಯುವತಿ ಮತ್ತು ಯುವಕನನ್ನು ಶಿವಮೊಗ್ಗದಲ್ಲಿ ವಶಕ್ಕೆ ಪಡೆದು ಮಲ್ಪೆ ಠಾಣೆಗೆ ಶನಿವಾರ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಎರಡೂ ಕುಟುಂಬದವರನ್ನು ಕರೆಸಿ ಮುಚ್ಚಳಿಕೆ ಬರೆಸಿ ಅವರವರ ಮನೆಗೆ ಕಳುಹಿಸಿಕೊಡಲಾಗಿದೆ.

ಬುಧವಾರ ಮಲ್ಪೆ ಸಂಬಂಧಿಕರ ಮನೆಯಲ್ಲಿದ್ದ 18ರ ವಯಸ್ಸಿನ ಯುವತಿ ಏಕಾಏಕಿ ನಾಪತ್ತೆಯಾಗಿದ್ದು, ಮಲ್ಪೆ ಠಾಣೆಗೆ ಮನೆಯವರು ದೂರು ನೀಡಿದ್ದರು. ಯುವತಿಯನ್ನು ಮುಸ್ಲಿಂ ಯುವಕ ಅಪಹರಿಸಿದ್ದು, ಇದು ಲವ್ ಜಿಹಾದ್ ಪ್ರಕರಣ ಎಂದು ಹಿಂದು ಸಂಘಟನೆಗಳು ಆರೋಪಿಸಿದ್ದವು.

ಬ್ರಹ್ಮಾವರ ಪರಿಸರದ ಯುವತಿ ಉಡುಪಿಗೆ ಪ್ರತಿನಿತ್ಯ ಕಾಲೇಜಿಗೆ ಬರುತ್ತಿದ್ದಾಗ ಸಂತೆಕಟ್ಟೆ ಯುವಕ ಬಸ್ ಚಾಲಕನ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಉಡುಪಿ ವಿವಾಹ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿಗೆ ಮುಂದಾಗಿದ್ದರು. ನೋಂದಣಿ ಕಚೇರಿಯ ನೋಟಿಸ್ ಬೋರ್ಡಿನಲ್ಲಿ ಪುತ್ರಿಯ ಫೋಟೊ ಗಮನಿಸಿದ ಮನೆಯವರು ಯುವತಿಗೆ ಬುದ್ಧಿಮಾತು ಹೇಳಿದ್ದರು. ಬಳಿಕ ಯುವಕನಿಂದ ದೂರಮಾಡಿ ಸಂಬಂಧಿಕರ ಮನೆಯಲ್ಲಿ ಇರಿಸಲಾಗಿತ್ತು. ಆದರೂ ಕೆಲದಿನಗಳ ನಂತರ ಯುವತಿ ಮತ್ತೆ ಯುವಕನೊಂದಿಗೆ ಪರಾರಿಯಾಗಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net