

ಮಡಿಕೇರಿ: ಸಮೀಪದ ಮೂರ್ನಾಡಿನಲ್ಲಿ ನಾಪತ್ತೆಯಾದ ವ್ಯಕ್ತಿಯೊಬ್ಬರ ಶವ ಭಾನುವಾರ ಕೊಡಂಬೂರಿನ ಕೆರೆಯಲ್ಲಿ ಪತ್ತೆಯಾಗಿದೆ.
ನಾಪೋಕ್ಲುವಿನ ಮೂರ್ನಾಡು ನಿವಾಸಿ, ಕೃಷಿ ಪತ್ತಿನ ಸಹಕಾರ ಸಂಘದ ನೌಕರ, ದಿ.ಮುತ್ತಣ್ಣ ಅವರ ಮಗ ಪೂಣಚ್ಚ (37) ಮೃತಪಟ್ಟವರು.
ಜ.23ರಂದು ಕಾಣೆಯಾಗಿದ್ದರು. ಈ ಬಗ್ಗೆ ಅಣ್ಣ ಕಿಶೋರ್ ಮೂರ್ನಾಡಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಲ್ಕು ದಿನಗಳಿಂದ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಭಾನುವಾರ ಕೊಡಂಬೂರಿನ ತೆಕ್ಕಡ ಮುತ್ತಣ್ಣ ಮಾಸ್ಟರ್ ಅವರ ಕೆರೆಯಲ್ಲಿ ಶವ ಪತ್ತೆಯಾಗಿದೆ. ಮುತ್ತಣ್ಣ ಮಾಸ್ಟರ್ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಮಧ್ಯಾಹ್ನ ಶವವನ್ನು ಕಂಡು ಮುತ್ತಣ್ಣ ಮಾಸ್ಟರ್‌ಗೆ ವಿಷಯವನ್ನು ತಿಳಿಸಿದ್ದಾರೆ. ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಮೂರ್ನಾಡು ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಪೇದೆ ರಾಜಾರಾಮ್ ಖಾಲಿದ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪೂಣಚ್ಚ ಅವರದ್ದೇ ಶವ ಎಂದು ದೃಢಪಡಿಸಲಾಗಿದೆ. ಶವವನ್ನು ಕೆರೆಯಿಂದ ಮೇಲಕ್ಕೆ ತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.