ಕ್ಷಿಪಣಿ ಮನುಷ್ಯ ಅಬ್ದುಲ್ ಕಲಾಂ

16
Published on

ಸರಳವಾಗಿ ಬದುಕಿ, ಉದಾತ್ತವಾಗಿ ಚಿಂತಿಸಿ ಎನ್ನುವ ಮಾತಿಗೆ ಅನ್ವರ್ಥವಾಗಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಬದುಕಿದ್ದರು ಎಂದು ಅಬ್ದುಲ್ ಕಲಾಂ ಅವರ ಶಿಷ್ಟಾಚಾರ ಅಧಿಕಾರಿಯಾಗಿದ್ದ ಜಯಪ್ರಕಾಶ್ ರಾವ್ ಪುತ್ತೂರು ಹೇಳಿದರು.

ಹಿರಿಯ ನಾಗರಿಕ ಮಂಡಳಿ ವತಿಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವೃತ್ತಿ ಇರಲಿ, ವೈಯಕ್ತಿಕ ಬದುಕೇ ಇರಲಿ ಎಲ್ಲರೊಂದಿಗೆ ಕಲಾಂ ಅವರು ಬೆರೆತು ಒಂದಾಗುತ್ತಿದ್ದ ಬಗೆ ಎಂಥವರಲ್ಲೂ ಬೆರಗು ಮೂಡಿಸುತ್ತಿತ್ತು ಎಂದರು.

ಎಲ್ಲರೂ ಅವರನ್ನು ‘ಕ್ಷಿಪಣಿ ಮನುಷ್ಯ’ ಎಂದೇ ಕರೆಯುತ್ತಿದ್ದರು ಎಂಬ ನೆನಪಿನ ಸುರುಳಿ ಬಿಚ್ಚಿಟ್ಟರು. ಸರಳವಾದ ಆಹಾರ ಪದ್ಧತಿಯನ್ನು ಬಯಸುತ್ತಿದ್ದ ಕಲಾಂ ಅವರು ಸಾರ್ವಜನಿಕರಿಗೆ ತಮ್ಮ ಜೀವನವನ್ನು ತೆರೆದಿಟ್ಟ ಪುಸ್ತಕವನ್ನಾಗಿಸಿದ್ದರು. ಮಾತ್ರವಲ್ಲ ರಾಷ್ಟ್ರಪತಿ ಭವನವನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿಟ್ಟು ಯಾರೂ ಮಾಡದಂತಹ ಮಹತ್ವದ ಕಾರ್ಯ ಮಾಡಿದ್ದರು. ಕಲಾಂ ಅವರು ಅರ್ಹ ವಿಜ್ಞಾನಿಯಾಗಿದ್ದರು. ಅದಕ್ಕೂ ಮುನ್ನ ಪೈಲಟ್ ಆಗಲು ಪ್ರಯತ್ನಿಸಿದ ಬಗ್ಗೆಯೂ ತಿಳಿಸಿದರು.

ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಹೋಲಿಸಿದರೆ ಆಧುನಿಕ ತಂತ್ರಜ್ಞಾನದೊಂದಿಗೆ ಉಪಗ್ರಹ ಉಡಾವಣೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿದಿರುವ ಇಸ್ರೋವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು, ಕಿರಿಯ ತಂಡವನ್ನು ಅಭಿವೃದ್ಧಿಪಡಿಸಲು ನಾಯಕರಾಗಿ ಸಾಧನೆಗೆ ಪ್ರೇರಣೆಯಾದದ್ದು ಅವರ ಜೀವನದ ಪ್ರಮುಖ ಅಂಶವಾಗಿತ್ತು. ಅವರ ನಾಯಕತ್ವದಲ್ಲಿ ಡಿಆರ್‌ಡಿಓದಲ್ಲಿ ಅದ್ಭುತ ಸಾಧನೆಗಳು ನಡೆದಿರುವುದು ಗಮನಾರ್ಹ ಎಂದು ಅವರು ಹೇಳಿದರು.

ಕಾರ್ಯದರ್ಶಿ ಕೆ.ಎಸ್. ಕೃಷ್ಣ ಸ್ವಾಗತಿಸಿದರು. ಅಧ್ಯಕ್ಷ ಡಾ.ಎಚ್.ಎಂ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಪ್ರೊ. ಜವರೇಗೌಡ ವಂದಿಸಿದರು. ಇ.ಸಿ.ಸಿ. ಟ್ರಸ್ಟ್‌ನ ಅಧ್ಯಕ್ಷ ಗೌಡಪ್ಪ, ಉಪಾಧ್ಯಕ್ಷ ಕೆ.ವಿ.ರಾಮನಾಥ್, ವಿ.ಎನ್.ಆಚಾರ್, ಕೆ.ವಿ.ಕೆ. ನಾಯ್ಡು, ಲತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net