ಮಿಸ್ ಯುನಿವರ್ಸಲ್ ಪೆಟೈಟ್ ಡಾ. ಶ್ರುತಿ, ಹುಬ್ಬಳ್ಳಿ ಯುವತಿಗೆ ಒಲಿದ ಅಂತಾರಾಷ್ಟ್ರೀಯ ಪ್ರಶಸ್ತಿ

IMG-20240615-WA0016-1.jpg
Published on

ಹುಬ್ಬಳ್ಳಿ: ಅಮೆರಿಕೆಯ ಫ್ಲೋರಿಡಾದಲ್ಲಿ ಯುನಿವರ್ಸಲ್ ಪೆಟೈಟ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ನಗರದ ಯುವತಿ ಡಾ. ಶ್ರುತಿ ಹೆಗ್ಡೆ ಪ್ರಥಮ ಬಹುಮಾನ ಪಡೆದಿದ್ದಾರೆ.

ಹೇಜಲಿ ಲೋಪೆಜ್ ಅವರಿಂದ 2009ರಲ್ಲಿ ಸ್ಥಾಪಿಸಲ್ಪಟ್ಟ ಯುನಿವರ್ಸಲ್ ಪೆಟೈಟ್ ಇದೊಂದು ಅಂತಾರಾಷ್ಟ್ರೀಯ ಪ್ರದರ್ಶನವಾಗಿದೆ. 5.6 ಅಡಿಗಿಂತ ಕಡಿಮೆ ಎತ್ತರ ಇರುವವರಿಗಾಗಿ ಪ್ರತಿ ವರ್ಷ ನಡೆಯುವ ಸ್ಪರ್ಧೆಯಲ್ಲಿ ವಿಶ್ವದ ಅನೇಕ ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಾರೆ.

2024ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಡಾ. ಶ್ರುತಿ ಹೆಗ್ಡೆ ಅವರು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮೊದಲ ಬಾರಿ ದೇಶಕ್ಕೆ ಪ್ರಶಸ್ತಿಯನ್ನು ತಂದು ಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ.

ಸ್ಪರ್ಧೆಯು ಹಲವಾರು ಸುತ್ತುಗಳನ್ನು ಒಳಗೊಂಡಿರುತ್ತದೆ.- ರಾಷ್ಟ್ರೀಯ ವೇಷಭೂಷಣ, ವೈಯಕ್ತಿಕ ಸಂದರ್ಶನ, ಪ್ರಶ್ನೆ ಮತ್ತು ಉತ್ತರ ಸೇರಿ ವಿವಿಧ ಹಂತಗಳಲ್ಲಿ ಸ್ಪಧಿರ್ಗಳ ಪರೀಕ್ಷೆ ನಡೆಯುತ್ತದೆ.

ಈ ಸ್ಪರ್ಧೆಗಾಗಿ ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದೆ, ಕಳೆದ ಎರಡ್ಮೂರು ತಿಂಗಳಿಂದ ಹೆಚ್ಚಿನ ಒತ್ತು ನೀಡಿದ್ದೆ. ಮುಂಬೈ, ದೆಹಲಿ ಸೇರಿ ದೇಶದ ಹಲವು ಕಡೆಗಳಲ್ಲಿ ಕಠಿಣ ತರಬೇತಿಯನ್ನು ಪಡೆದಿದ್ದೆ. ರೀಟಾ ಗಂಗ್ವಾನಿ ಅವರಿಂದ ಸಂವಹನ, ತನ್ವಿ ಕರೋಟೆ ಅವರಿಂದ ನಡಿಗೆ, ಪ್ರಜಕ್ತಾ ಅಲ್ಬರ್ಕರ್ಕ ಅವರಿಂದ ಧ್ವನಿ ಮಾಡ್ಯುಲೇಶನ್ ಹೀಗೆ ಹಲವರಿಂದ ತರಬೇತಿ ಪಡೆದಿದ್ದೆ ಎಂದು ಡಾ. ಶ್ರುತಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಜನರಲ್ ಫಿಜಿಷಿಯನ್ ಆಗಿರುವ ಡಾ. ಕೆ.ಎಂ. ಹೆಗ್ಡೆ ಹಾಗೂ ಕಮಲಾ ಅವರ ಪುತ್ರಿಯಾಗಿರುವ ಡಾ. ಶ್ರುತಿ ಹೆಗ್ಡೆ ಸದ್ಯ ಎಂಬಿಬಿಎಸ್ ಮುಗಿಸಿ ತುಮಕೂರಿನಲ್ಲಿ ಡರ್ಮಟಾಲಾಜಿಯಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net