ತುಳು ಸಿನೆಮಾದಲ್ಲಿ ನಟಿಸಲು ಸಿದ್ಧ ಎಂದ ಮಿಸ್‌ ಇಂಡಿಯಾ ಸಿನಿ ಶೆಟ್ಟಿ

udp-sini shetty
Published on

ಉಡುಪಿ: ಬಾಲಿವುಡ್‌ ಸಹಿತ ಯಾವುದೇ ಸಿನೆಮಾ ರಂಗದಿಂದ ಸದ್ಯಕ್ಕೆ ಆಫರ್‌ ಬಂದಿಲ್ಲ. ತುಳು ಮಾತೃಭಾಷೆಯಾಗಿರುವುದರಿಂದ ತುಳುಚಿತ್ರಗಳಲ್ಲಿ ಅವಕಾಶ ಸಿಕ್ಕಿದರೆ ನಟಿಸಲು ಸಿದ್ಧ ಎಂದು ಫೆಮಿನಾ ಮಿಸ್ ಇಂಡಿಯಾ-2022 ಸಿನಿ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿ ಬಂಟರ ಸಂಘದ ವತಿಯಿಂದ ತವರೂರ ಸನ್ಮಾನ ಸ್ವೀಕರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಹಿಂದೆ ಆನೇಕ ವೆಬ್‌ ಸಿರೀಸ್‌, ಟಿ.ವಿ. ಧಾರವಾಹಿಗಳಲ್ಲಿ ನಟಿಸಿದ್ದೇನೆ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗಿದ್ದು, ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಮುಂದಿನ ಮಿಸ್‌ ವಲ್ಡ್‌ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ಬೇಕಾದ ಪೂರ್ವ ತಯಾರಿ ನಡೆಸುತ್ತಿದ್ದೇನೆ. ಬಾಲ್ಯದಿಂದಲೂ ಅಜ್ಜಿ ಬೆಂಬಲವಾಗಿದ್ದರು. ನನ್ನ ಸಾಧನೆಗೆ ಅವರೇ ಪ್ರೇರೇಪಣೆ. ತಂದೆ-ತಾಯಿಯ ಪಾತ್ರವೂ ಬಹುಮುಖ್ಯವಾಗಿದೆ. ಈಗ ಎಲ್ಲರೂ ನನ್ನನ್ನು ಗುರುತಿಸಿರುವ ಬಗ್ಗೆ ತುಂಬಾ ಖುಷಿಯಾಗಿದೆ. ತವರೂರಿನಲ್ಲಿ ಸಿಕ್ಕಿರುವ ಸ್ವಾಗತಕ್ಕೆ ತುಂಬಾ ಸಂತೋಷವಾಗಿದೆ. ಈಗಾಗಲೇ ಎರಡು ಮೂರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಹಂಬಲವಿದೆ. ಅದರ ವಿವರಗಳನ್ನು ಮಿಸ್ ಇಂಡಿಯಾ ಪುಟದಲ್ಲಿ ಅಧಿಕೃತವಾಗಿ ಪ್ರಕಟಿಸುತ್ತೇನೆ ಎಂದರು.

ತಂದೆ ಸದಾನಂದ ಶೆಟ್ಟಿ, ತಾಯಿ ಹೇಮಾ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್‌ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net