

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ರಾಜ್ಯದ ಅಭಿವೃದ್ಧಿ ಕಡೆಗಣಿಸಿ ಒಂದೇ ವರ್ಗದ ಓಲೈಕೆಯಲ್ಲಿ ತೊಡಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರಕುಮಾರ್ ಕುಂದಾಪುರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಗ್ಯಾರಂಟಿಗಳ ಆಮಿಷದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್, ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಬರಪರಿಹಾರ ಕಾರ್ಯದಲ್ಲಿ ವಿಲವಾಗಿದೆ. ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಜನರು ಗುಳೆಹೋಗುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂ. ಸಹಾಯಧನ ನೀಡುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ರೈತರಿಗೆ ಹೆಚ್ಚುವರಿಯಾಗಿ 4 ಸಾವಿರ ರೂ. ಸಹಾಯಧನ ನೀಡಲಾಗುತ್ತಿತ್ತು, ಆದರೆ, ಕಾಂಗ್ರೆಸ್ ಸರ್ಕಾರ ಈ ಅನುದಾನ ಸ್ಥಗಿತ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಬ್ರಾಂಡ್: ಆಹಾರ ಸಾಮಗ್ರಿಗಳ ಬೆಲೆ ಏರಿಕೆಯಿಂದ ಕಷ್ಟ ಅನುಭವಿಸುತ್ತಿರುವ ಜನ ಸಾಮಾನ್ಯರಿಗಾಗಿ ಕೇಂದ್ರ ಸರ್ಕಾರ ಕೇವಲ 27.50 ರೂ.ದರದಲ್ಲಿ ಗೋಧಿ ಹಿಟ್ಟು ವಿತರಿಸುತ್ತಿದೆ. ಭಾರತ್ ದಾಲ್ ಬ್ರಾಂಡ್ ಮೂಲಕ ರಿಯಾಯಿತಿ ದರದಲ್ಲಿ ಕಡಲೆಬೇಳೆ ಮಾರಾಟ ಮಾಡಲಾಗುತ್ತಿದೆ. 29 ರೂಪಾಯಿಗೆ 1 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದ್ದು, ದೇಶದ ಬಡವರಿಗೆ ಇದು ಸಹಕಾರಿಯಾಗಿದೆ. ಗರೀಬ್ ಕಲ್ಯಾಣ್ ಅನ್ನಯೋಜನೆ ಮೂಲಕ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಿಸಲಾಗುತ್ತಿದೆ ಎಂದರು.
ಮನೆ ಮನೆಗೆ ಶುದ್ಧ ಕುಡಿಯುವ ನೀರು, ಆಯುಷ್ಮಾನ್ ಕಾರ್ಡ್, ಜನಧನ ಯೋಜನೆ, 10 ಕೋಟಿಗೂ ಅಧಿಕ ಶೌಚಗೃಹ ನಿರ್ಮಾಣ, ಎರಡು ಸಾವಿರಕ್ಕೂ ಅಧಿಕ ರೈಲ್ವೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇವೆಲ್ಲವೂ ಮೋದಿ ಸರ್ಕಾರದ ಮಹತ್ವದ ಸಾಧನೆಗಳಾಗಿವೆ ಎಂದರು.
5ರಂದು ಪ್ರಬುದ್ಧರ ಸಭೆ
ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ಮಾ.5ರಂದು ಬೆಳಗ್ಗೆ 11ಕ್ಕೆ ಪ್ರಬುದ್ಧರ ಸಭೆ ಆಯೋಜಿಸಲಾಗಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಹಾಗೂ ಸಂಸತಿ ಇಲಾಖೆಯ ರಾಜ್ಯ ಸಚಿವೆ ಮೀನಾ ಲೇಖಿ ಸಭೆ ಉದ್ಘಾಟಿಸಲಿದ್ದಾರೆ. ವೈದ್ಯರು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ&ಸಂವಾದ ನಡೆಸಲಿದ್ದಾರೆ ಎಂದು ಕಿಶೋರಕುಮಾರ್ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ, ರೇಶ್ಮಾ ಉದಯ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಉಪಾಧ್ಯಕ್ಷ ಕಿರಣ್ಕುಮಾರ್ ಬೈಲೂರು, ವಕ್ತಾರರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ, ವಿಜಯಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.