ಪಡಿತರಕ್ಕೆ ಪರದಾಟ! ಇಕೆವೈಸಿಗೆ ಸರ್ವರ್ ಕಾಟ, ಆಧಾರ್ ಜೋಡಣೆಗಾಗಿ ಅಲೆದಾಟ

Ration
Published on

| ಹರೀಶ್ ಬೇಲೂರು ಬೆಂಗಳೂರು

ನಕಲಿ ರೇಷನ್ ಕಾರ್ಡ್ ಹಾಗೂ ಪಡಿತರ ಸೋರಿಕೆ ತಡೆಯುವ ಉದ್ದೇಶದಿಂದ ಜಾರಿಗೊಳಿಸಿರುವ ರೇಷನ್ ಕಾರ್ಡ್​ಗೆ ಆಧಾರ್ ದೃಢೀಕರಿಸುವ (ಇಕೆವೈಸಿ) ಪ್ರಕ್ರಿಯೆಗೆ ಸರ್ವರ್ ಮತ್ತು ನೆಟ್​ವರ್ಕ್ ಗ್ರಹಣ ಹಿಡಿದಿರುವ ಪರಿಣಾಮ ಪಡಿತರದಾರರು ಪ್ರತಿನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವಂತಾಗಿದೆ. ಸರ್ವರ್ ಸಮಸ್ಯೆಯಿಂದ ಅಂಗಡಿಗಳ ಮುಂದೆ ಕ್ಯೂನಿಲ್ಲುವ ಪರಿಸ್ಥಿತಿ ಇರುವುದರಿಂದ ಆಹಾರ ಇಲಾಖೆ ಇಕೆವೈಸಿ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಇಕೆವೈಸಿ ಮಾಡಿಸದಿದ್ದರೆ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಕಾರ್ಡ್​ದಾರರು ದೈನಂದಿನ ಕೆಲಸ ಕಾರ್ಯ ಬಿಟ್ಟು ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. 2 ವರ್ಷದಲ್ಲಿ ಶೇ.60ರಷ್ಟು ಕಾರ್ಡ್ ದಾರರಷ್ಟೇ ಇಕೆವೈಸಿ ಮಾಡಿಸಿದ್ದು, ಇನ್ನೂ ಶೇ.40 ಬಾಕಿ ಉಳಿದಿದೆ.

2019ರ ಜು.19ರಂದು ಪಡಿತರ ಕಾರ್ಡ್​ನ ಪ್ರತಿ ಸದಸ್ಯರು ಇಕೆವೈಸಿ ಮಾಡಿಸಿಕೊಳ್ಳಬೇಕೆಂದು ಆಹಾರ ಇಲಾಖೆ ಸುತ್ತೋಲೆ ಹೊರಡಿಸಿತು. ಆರಂಭದಲ್ಲಿ ಇದಕ್ಕೆ ಅಸಡ್ಡೆ ಮಾಡಿದ ವರ್ತಕರು ಹಾಗೂ ರಾಜ್ಯ ಪಡಿತರ ವಿತರಕ ಸಂಘ ಕುಂಟು ನೆಪ ಹೇಳಿಕೊಂಡು ಬಂದಿದ್ದರಿಂದ 2020ರಲ್ಲಿ ಇಕೆವೈಸಿ ಪ್ರಕ್ರಿಯೆಯಲ್ಲಿ ಅಷ್ಟೇನೂ ಪ್ರಗತಿ ಕಾಣಲಿಲ್ಲ. ಹೀಗಾಗಿ ಇಲಾಖೆ ವರ್ತಕರಿಗೆ ಖಡಕ್ ಎಚ್ಚರಿಕೆ ನೀಡಿ ಇಕೆವೈಸಿ ಪ್ರಕ್ರಿಯೆಯನ್ನು ನಿಗದಿತ ಗಡುವಿನೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಕಟ್ಟಪ್ಪಣೆ ಮಾಡಿತ್ತು.

ಇಲಾಖೆ ಎಡವಟ್ಟು!: ಪ್ರತಿ ತಿಂಗಳು 1ರಿಂದ 10ನೇ ತಾರೀಖಿನವರೆಗೆ ಕಡ್ಡಾಯವಾಗಿ ಕಾರ್ಡ್​ದಾರರ ಇಕೆವೈಸಿ ಸಂಗ್ರಹಿಸಬೇಕೆಂದು ಇಲಾಖೆ ಆದೇಶಿಸಿತ್ತು. ಪುನಃ ಸೆ.9ರಂದು ಹೊಸ ಆದೇಶ ಹೊರಡಿಸಿ 11ರಿಂದ 15ನೇ ತಾರೀಖಿನವರೆಗೆ ಪೂರ್ತಿ ದಿನ ಹಾಗೂ 15ರಿಂದ 30ನೇ ತಾರೀಖಿನವರೆಗೆ ಪ್ರತಿನಿತ್ಯ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಇಕೆವೈಸಿ ನಡೆಸಬೇಕೆಂದು ಹೇಳಿತ್ತು. ಇದೇ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್​ದಾರರಿಗೆ ರೇಷನ್ ವಿತರಣೆಯನ್ನೂ ಮಾಡಲಾಗುತ್ತಿದೆ. ಆದರೆ, ವಾರದಿಂದ ರಾಜ್ಯಾದ್ಯಂತ ಸರ್ವರ್ ಕೈಕೊಟ್ಟಿರುವುದರಿಂದ ಇಕೆವೈಸಿ ಸಾಧ್ಯವಾಗುತ್ತಿಲ್ಲ.

ಬೇಕಾಬಿಟ್ಟಿ ಆದೇಶಕ್ಕೆ ಆಕ್ರೋಶ: ಇಲಾಖೆಯ ಬೇಕಾಬಿಟ್ಟಿ ಆದೇಶಗಳಿಂದ ಕಾರ್ಡ್​ದಾರರು ಕಂಗೆಟ್ಟು ಹೋಗಿದ್ದಾರೆ. ಸರ್ವರ್ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ಇಲಾಖೆ ಹೇಳುತ್ತಿದ್ದರೂ ಪೂರ್ತಿಯಾಗಿ ಬಗೆಹರಿದಿಲ್ಲ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಕೆವೈಸಿ ಏಕೆ?: 5 ವರ್ಷದ ಹಿಂದೆ ಇಲಾಖೆ ವತಿಯಿಂದ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್​ಗಳ ಪರಿಶೀಲನೆ ಕಾರ್ಯ ನಡೆದಿತ್ತು. ನಂತರ, ರೇಷನ್ ಕಾರ್ಡ್​ಗೆ ಆಧಾರ್ ಜೋಡಣೆ ನಿಯಮ ತರಲಾಗಿತ್ತು. ಶೇ.100 ಆಧಾರ್ ಜೋಡಣೆಯಾಗಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆಯಾಗಿತ್ತು. ಆದರೆ, 5 ವರ್ಷಗಳಿಂದ ಕಾರ್ಡ್​ಗಳ ಪರಿಶೀಲನೆ ಕಾರ್ಯ ನಡೆದಿಲ್ಲ. ಅವರ ಕುಟುಂಬದವರು ಸತ್ತಿರುವ ಫಲಾನುಭವಿಗಳ ಹೆಸರಿನಲ್ಲಿ ರೇಷನ್ ಪಡೆಯುತ್ತಿದ್ದಾರೆ. ಈ ಅವಧಿಯಲ್ಲಿ ಅಂದಾಜು 10 ಲಕ್ಷ ಫಲಾನುಭವಿಗಳು ಮೃತಪಟ್ಟಿರುವ ಬಗ್ಗೆ ಇಲಾಖೆ ಅಂದಾಜಿಸಿದೆ. ಆದ್ದರಿಂದ, ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ (ಎನ್​ಎಫ್​ಎಸ್​ಎ) ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ ಪಡಿತರ ಕಾರ್ಡ್​ನ ಪ್ರತಿಯೊಬ್ಬರು ಇಕೆವೈಸಿ ಮಾಡಿಸಿಕೊಳ್ಳಬೇಕೆಂಬ ನಿಯಮವಿದೆ. ಎಲ್ಲ ಕಾರ್ಡ್​ದಾರರು ಇಕೆವೈಸಿ ಮಾಡಿಸಿಕೊಂಡರೆ ನಕಲಿ ಕಾರ್ಡ್ ಪತ್ತೆಯಾಗುವುದಲ್ಲದೆ ಪಡಿತರ ಸೋರಿಕೆ ತಡಗಟ್ಟಬಹುದು. ಇದರಿಂದ, ಪ್ರತಿ ವರ್ಷ ಇಲಾಖೆಗೆ ಅಂದಾಜು 250 ಕೋಟಿ ರೂ.ಉಳಿತಾಯವಾಗಲಿದೆ.

ಸರ್ವರ್ ಸಮಸ್ಯೆ ಯಿಂದಾಗಿ ರೇಷನ್ ಕಾಕಾರ್ಡ್​ಗೆ ಆಧಾರ್ ದೃಢೀಕರಣ (ಇಕೆವೈಸಿ) ಪ್ರಕ್ರಿಯೆಯನ್ನು ಸದ್ಯ ನಿಲ್ಲಿಸಲಾಗಿದೆ. | ಶ್ಯಾಮ್ಲಾ ಇಕ್ಬಾಲ್ ಆಹಾರ ಇಲಾಖೆ ಆಯುಕ್ತೆ

ಹಾಡಿ, ತಾಂಡದಲ್ಲೇ ಪಡಿತರ!

ಬೆಂಗಳೂರು: ರಾಜ್ಯದಲ್ಲಿರುವ ಹಾಡಿ, ತಾಂಡಗಳು, ಗೊಲ್ಲರಹಟ್ಟಿ, ಪರಿಶಿಷ್ಟ ಜಾತಿ ಮತ್ತು ಪಂಗಡ (ಎಸ್ಟಿ) ಕಾಲನಿಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅನ್ನಭಾಗ್ಯ ಯೋಜನೆಯಡಿ ಕಾರ್ಡ್​ದಾರರಿಗೆ ಪಡಿತರ ವಿತರಿಸುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಸದ್ಯ 10,89,445 ಅಂತ್ಯೋದಯ, 1,15,02,798 ಬಿಪಿಎಲ್ ಹಾಗೂ 21,44,006 ಎಪಿಎಲ್ ಸೇರಿ ಒಟ್ಟಾರೆ 1,47,36,249 ರೇಷನ್ ಕಾರ್ಡ್​ಗಳಿದ್ದು, 19,963 ನ್ಯಾಯಬೆಲೆ ಅಂಗಡಿಗಳಿಂದ ಪ್ರತಿ ತಿಂಗಳು ಎಲ್ಲ ಕಾರ್ಡ್​ದಾರರಿಗೆ ರೇಷನ್ ಹಂಚಿಕೆ ಮಾಡಲಾಗುತ್ತಿದೆ.

100 ಕಾರ್ಡ್​ಗೊಂದು ಅಂಗಡಿ: ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016ರ ಸೆಕ್ಷನ್ ನಿಯಮದಂತೆ ಕನಿಷ್ಠ 100 ಪಡಿತರ ಚೀಟಿಗಳಿಗೆ ಸೀಮಿತಗೊಳಿಸಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಬೇಕು. ವಿವಿಧ ಇಲಾಖೆ, ನಿಗಮ ಹಾಗೂ ಮಂಡಳಿಗಳಿಂದ ಹಾಡಿ, ತಾಂಡಗಳು, ಗೊಲ್ಲರಹಟ್ಟಿ, ಎಸ್ಸಿ ಮತ್ತು ಎಸ್ಟಿ ಕಾರ್ಡ್​ದಾರರರ ಮಾಹಿತಿ ಪಡೆದು ಅಗತ್ಯವಿರುವ ಪ್ರದೇಶಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು. ಈ ಪ್ರಕ್ರಿಯೆಯನ್ನು ಬರುವ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಗಡುವು ನೀಡಿದೆ.

ಲಾಭಾಂಶ ಕಡಿಮೆ: ಹಾಡಿ, ತಾಂಡಗಳು, ಗೊಲ್ಲರಹಟ್ಟಿ, ಎಸ್ಸಿ ಮತ್ತು ಎಸ್ಟಿ ಕಾಲನಿಗಳಲ್ಲಿ ಮಾತ್ರ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯುವ ತೀರ್ಮಾನ ಗೊಂದಲಕ್ಕೆ ಕಾರಣವಾಗಿದೆ. ರಾಜ್ಯದ ಕೆಲವಡೆ 1,500 ಅಥವಾ 2,000 ಕಾರ್ಡ್​ಗಳಿಗೆ ಒಂದರಂತೆ ಹಾಗೂ ಇನ್ನೊಂದೆಡೆ 500 ಅಥವಾ 900 ಕಾರ್ಡ್​ಗೆ ಒಂದರಂತೆ ನ್ಯಾಯಬೆಲೆ ಅಂಗಡಿಗಳಿವೆ.

ಪಡಿತರ ನೀಡುವುದಕ್ಕಾಗಿ ಮಾಲೀಕರಿಗೆ ಪ್ರತಿ ಕ್ವಿಂಟಾಲ್​ಗೆ 100 ರೂ.ನಂತೆ ಸರ್ಕಾರ ಕಮಿಷನ್ ಕೊಡುತ್ತದೆ. ಆದರೆ, 100 ಕಾರ್ಡ್​ಗೆ ಒಂದರಂತೆ ನ್ಯಾಯಬೆಲೆ ಅಂಗಡಿ ತೆರೆದರೆ ಬಾಡಿಗೆ, ಎಲೆಕ್ಟ್ರಾನಿಕ್ ಆಧಾರಿತ ತೂಕದ ಯಂತ್ರ ಅಳವಡಿಕೆ ಸೇರಿ ಇನ್ನಿತರ ಖರ್ಚುಗಳು ಬರಲಿವೆ. 100 ಕಾರ್ಡ್​ಗಳಿಗೆ ಅಂದಾಜು 20-25 ಕ್ವಿಂಟಾಲ್ ರೇಷನ್ ಸಾಕಾಗಲಿದೆ. ಇದರಿಂದ ಪ್ರತಿ ಕ್ವಿಂಟಾಲ್​ಗೆ 100 ರೂ.ನಂತೆ 20-25 ರೇಷನ್ ಹಂಚಿಕೆ ಮಾಡಿದರೆ 2 ಸಾವಿರ ರೂ.ನಿಂದ 2,500 ರೂ. ಕಮಿಷನ್ ಬರಲಿದೆ. ಕಮಿಷನ್ ಬಿಟ್ಟರೆ ಬೇರೆ ಲಾಭಾಂಶ ಸಿಗೋದಿಲ್ಲ. ಇದು ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯದ ವಿವಿಧೆಡೆ ನಷ್ಟದಲ್ಲೂ ನ್ಯಾಯಬೆಲೆ ಅಂಗಡಿಗಳನ್ನು ನಡೆಸಲಾಗುತ್ತಿದೆ. ಪ್ರತಿ ಕ್ವಿಂಟಾಲ್​ಗೆ 100 ರೂ.ನಂತೆ ಸರ್ಕಾರ ಕಮಿಷನ್ ಹಣ ಕೊಡುತ್ತಿದೆ. ಸಕಾಲದಲ್ಲಿ ಕಮಿಷನ್ ಹಣವೂ ಸಿಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಬಾಡಿಗೆ ಹಾಗೂ ನಿರ್ವಹಣೆ ಹೆಚ್ಚಳದಿಂದಾಗಿ ಅಂಗಡಿಗಳನ್ನು ನಡೆಸಲು ಕಷ್ಟವಾಗುತ್ತಿದೆ. ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ವಿಚಾರ ಬಗ್ಗೆ ಸರ್ಕಾರ ಪುನರ್ ಪರಿಶೀಲಿಸಬೇಕು. | ಟಿ.ಕೃಷ್ಣಪ್ಪ. ರಾಜ್ಯ ಪಡಿತರ ವಿತರಕ ಸಂಘ ಅಧ್ಯಕ್ಷ

ಪ್ರಕ್ರಿಯೆ ಹೇಗೆ?

ರೇಷನ್ ಕಾರ್ಡ್​ನಲ್ಲಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್ ದೃಢೀಕರಣ ಮಾಡಿಸಬೇಕು. ಸರ್ಕಾರವು ಪ್ರತಿ ಫಲಾನುಭವಿಯ ದೃಢೀಕರಣಕ್ಕೆ 5 ರೂ. ನಂತೆ ಮತ್ತು ಒಂದು ಕುಟುಂಬದಲ್ಲಿ ಎಷ್ಟೇ ಫಲಾನುಭವಿ ಇದ್ದರೂ ನೋಂದಣಿಗೆ ಗರಿಷ್ಠ 20 ರೂ. ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸಲಿದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇಕೆವೈಸಿ ಮಾಡಿಸತಕ್ಕದು. ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ ಎಲ್ಲರೂ ಆಧಾರ್ ದೃಢೀಕರಣ ಮಾಡಿಸಬೇಕು. ಫಲಾನುಭವಿ ಮೃತಪಟ್ಟಿರುವ ಮತ್ತು ಬೇರೆ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ದೃಢೀಕರಣ ವೇಳೆ ಲೆಕ್ಕ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net