ಕಲ್ಲಂಗಡಿ ಹಣ್ಣಿನ ಬಗ್ಗೆ ಅಪಪ್ರಚಾರ

images
Published on

ಪಿರಿಯಾಪಟ್ಟಣ: ರೈತರು ಬೆಳೆದ ಕಲ್ಲಂಗಡಿ ಹಣ್ಣಿನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಹಾಗೂ ಪಿ ಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ಚಂದ್ರಶೇಖರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಾದ್ಯಂತ ಬಹಳಷ್ಟು ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಈ ಬೆಳೆಗೆ ಸೂಕ್ತ ಬೆಂಬಲ ಬೆಲೆ ಕೂಡ ಸರ್ಕಾರ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲಂಗಡಿ ಹಣ್ಣಿಗೆ ಬಣ್ಣ ಬರಲು ವಿಷಪೂರಿತ ಚುಚ್ಚುಮದ್ದು ಹಾಕುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಿಡಿಯೋಗಳು ವೈರಲ್ ಮಾಡುತ್ತಿದ್ದಾರೆ. ಇದರಿಂದಾಗಿ ಕಲ್ಲಂಗಡಿ ಹಣ್ಣು ಕೊಂಡುಕೊಳ್ಳುವ ಮತ್ತು ಸೇವಿಸುವ ಗ್ರಾಹಕರು ಭಯದಿಂದ ಹಣ್ಣನ್ನು ತಿರಸ್ಕಾರ ಮಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿ ಬೇಸರ ವ್ಯಕ್ತಪಡಿಸಿದರು.

ನಾನು ಹಲವು ವರ್ಷಗಳಿಂದ ಹತ್ತು ಎಕರೆಯಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಿದ್ದೇನೆ. ಪ್ರತಿ ಹಣ್ಣು ಕೂಡ ಅದರ ಸ್ವಭಾವದ ಬಣ್ಣ ಮತ್ತು ಆಕಾರ, ರುಚಿಯನ್ನು ಹೊಂದಿರುತ್ತದೆ. ಹಣ್ಣುಗಳಿಗೆ ಕೃತಕವಾಗಿ ಯಾವುದೇ ರೀತಿಯ ಮದ್ದನ್ನು ನೀಡಲು ಸಾಧ್ಯವಿಲ್ಲ, ಕಲ್ಲಂಗಡಿ ಹಣ್ಣಿಗೂ ಕೂಡ ಯಾವುದೇ ರೀತಿಯ ಔಷಧಗಳನ್ನು ಚುಚ್ಚುಮದ್ದು ಮಾಡಲು ಸಾಧ್ಯವಿಲ್ಲ ಎಂದರಲ್ಲದೆ, ಕಿಡಿಗೇಡಿಗಳು ಮಾಡಿರುವ ಅಪಪ್ರಚಾರದಿಂದ ಇಂದು ಕಲ್ಲಂಗಡಿಯನ್ನು ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರವು ಕೂಡಲೇ ಕಲ್ಲಂಗಡಿ ಹಣ್ಣಿನ ಪರೀಕ್ಷೆಗೆ ಒಳಪಡಿಸಿ ಅದನ್ನು ತಿನ್ನಲು ಉಪಯುಕ್ತವಾದ ಆಹಾರ ಪದಾರ್ಥ ಎಂದು ಘೋಷಿಸಬೇಕು ಹಾಗೂ ಸೂಕ್ತ ಬೆಲೆ ನಿಗದಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಗ್ರಹಿಸಿದರು.

ಕಲ್ಲಂಗಡಿ ಹಣ್ಣಿನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ರೈತರಾದ ಶಿವರುದ್ರ ನಾಯಕ, ಎ.ಎಸ್.ಜಗದೀಶ್, ಎ.ಎಸ್.ಮಂಜು, ಎ.ಎಂ.ಧರ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net