

ಹುಳಿಯಾರು: ಗ್ರಾಮೀಣ ಜನ ದಾಖಲೆಗಳಿಗಾಗಿ ತಾಲೂಕು ಕೇಂದ್ರಕ್ಕೆ ಬರುವುದರಿಂದ ಸಮಯ ಮತ್ತು ಹಣ ವ್ಯರ್ಥವಾಗುತ್ತದೆಂದು ಹೋಬಳಿ ಕೇಂದ್ರಗಳಲ್ಲಿ ನಾಡಕಚೇರಿ ತೆರೆಯಲಾಗಿದೆ. ಆದರೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿ ಕೇಂದ್ರದಲ್ಲಿನ ನಾಡಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಬಿಟ್ಟರೆ ಮತ್ತಾರೂ ಇರದ ಪರಿಣಾಮ ಸಣ್ಣಪುಟ್ಟ ಕೆಲಸಕ್ಕೂ ಜನ ಅಲೆಯುವ ಪರಿಸ್ಥಿತಿ ನಿಮಾರ್ಣವಾಗಿದೆ.
ಹಂದನಕೆರೆ ರೈತರು, ಕೂಲಿಕಾರ್ಮಿಕರು ಹೆಚ್ಚಾಗಿರುವ ಹಿಂದುಳಿದ ಹೋಬಳಿ ಕೇಂದ್ರ. ಮಲ್ಲಿಗೆರೆ, ಬರಗೂರು, ಚೌಳಕಟ್ಟೆ, ದೊಡ್ಡಎಣ್ಣೇಗೆರೆ, ಹಂದನಕೆರೆ ಗ್ರಾಪಂ ವ್ಯಾಪ್ತಿಯ ಸಹಸ್ರಾರು ಜನರಿಗೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಹಾಗೂ ಕಂದಾಯ ಇಲಾಖೆಯ ಮೂಲ ದಾಖಲಾತಿಗಳನ್ನು ಕೊಡುವ ಉದ್ದೇಶದಿಂದ ನಾಡಕಚೇರಿ ತೆರೆಯಲಾಗಿದೆ. ಆದರೆ ದೂರದ ಹಳ್ಳಿಗಳಿಂದ ಬೇಸಾಯದ ಕೆಲಸ ಕಾರ್ಯ ಬಿಟ್ಟು ಬಂದರೆ ಕೆಲಸವಾಗದೆ ಬರಿಗೈಲಿ ತೆರಳಬೇಕಾದ ಪರಿಸ್ಥಿತಿ ಬಂದಿದೆ ಎಂಬುದು ಸಾರ್ವಜನಿಕರ ದೂರಾಗಿದೆ.
ಆರ್ಆರ್ 5-6, ಹಳೇ ಕೈ ಬರಹದ ಪಹಣಿ, ಮರಣಪತ್ರ ಹೀಗೆ ವಿವಿಧ ಭೂದಾಖಲೆಗಳು ಇಲ್ಲಿ ಲಭ್ಯ ಇರುವುದಿಲ್ಲ. ಕೇಳಿದರೆ ಕಟ್ಟಡ ಶಿಥಿಲವಾಗಿರುವುದರಿಂದ ಸುರಕ್ಷತೆ ಹಿತದೃಷ್ಟಿಯಿಂದ ಇಲ್ಲಿಡದೆ ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿದೆ ಎನ್ನುತ್ತಾರೆ. ಇವುಗಳನ್ನು ಪಡೆಯಲು ಚಿಕ್ಕನಾಯಕನಹಳ್ಳಿಗೆ ಅಲೆಯಬೇಕು. ಇನ್ನು ವಂಶವೃಕ್ಷ, ಜಾತಿ ಪ್ರಮಾಣ ಪತ್ರ, ಭೂಸರ್ವೇ ಹೀಗೆ ವಿವಿಧ ದಾಖಲಾತಿ ಪಡೆಯಲು ಆರ್ಐ, ವಿಎ ಸಹಿ ಮಾಡಿಸೋಣ ಎಂದರೆ ಅವರ್ಯಾರೂ ಕಚೇರಿಗೆ ಬರೋದೆ ಇಲ್ಲ. ಪರಿಣಾಮ ಇವರನ್ನು ಹುಡುಕಾಡಿ ಸಹಿ ಪಡೆಯಬೇಕಿದೆ ಎಂಬುದು ಈ ಭಾಗದ ಜನರ ಅಳಲಾಗಿದೆ.
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರೆಲ್ಲರೂ ಕರ್ತವ್ಯ ಸ್ಥಳದಲ್ಲೇ ವಾಸವಿರಬೇಕು ಎನ್ನುವ ನಿಯಮ ಇಲ್ಲಿ ಗಾಳಿಗೆ ತೂರಲಾಗಿದೆ. ಆರ್ಐ ಹರೀಶ್ ಚಿಕ್ಕನಾಯಕನಹಳ್ಳಿಯಲ್ಲೂ, ಗ್ರಾಮ ಲೆಕ್ಕಿಗರು ತಮ್ಮತಮ್ಮ ಊರಿನಲ್ಲೂ ಇದ್ದು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಹಂದನಕೆರೆಯ ಜನ ಸಣ್ಣ ಕೆಲಸಕ್ಕೂ ಅಲೆಯುವಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು, ಮೇಲಧಿಕಾರಿಗಳು ಹಂದನಕೆರೆ ನಾಡಕಚೇರಿಯಲ್ಲಿ ಸಿಬ್ಬಂದಿಗಳಿಗೆ ಜನರ ಕೆಲಸಕಾರ್ಯಗಳನ್ನು ಮಾಡಿಕೊಡುವಂತೆ ಕ್ರಮವಹಿಸಬೇಕು ಎಂಬುದು ರೈತರ ಒತ್ತಾಯ.
ಯಾವುದೇ ಸಮಸ್ಯೆಯಿಲ್ವಲ್ಲ ಎನ್ನುವ ತಹಸೀಲ್ದಾರ್
ಹಂದನಕೆರೆ ನಾಡಕಚೇರಿಯಲ್ಲಿ ಯಾವುದೇ ಮೂಲ ದಾಖಲೆಗಳಿಲ್ಲದೆ ಜನರು ಚಿಕ್ಕನಾಯಕನಹಳ್ಳಿಗೆ ಅಲೆಯುವಂತಾಗಿದೆ ಎಂದು ತಹಸೀಲ್ದಾರ್ ಕೆ.ಪುರಂದರ ಅವರ ಗಮನಕ್ಕೆ ತಂದರೆ ಯಾರೋ ನಿಮಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ದಾಖಲೆಗಳು ಸಿಗುತ್ತಿದ್ದು, ಯಾವುದೇ ಸಮಸ್ಯೆಯಿಲ್ವಲ್ಲ ಎನ್ನುತ್ತಾರೆ. ಆರ್ಆರ್ 5-6, ಮರಣ ಪ್ರಮಾಣ ಪತ್ರ ಹೀಗೆ ಕೇಳಿದರೆ ಯಾವ ಸರ್ವೇ ನಂಬರ್ನ ಆರ್ಆರ್ ಬೇಕು? ಯಾರ ಮರಣ ಪ್ರಮಾಣ ಪತ್ರ ಬೇಕೆಂದು ಹೇಳಿ ಎಂದು ಮರು ಪ್ರಶ್ನಿಸುತ್ತಾರೆ?. ಯಾವುದೇ ದಾಖಲಾತಿಗಳು ಅಲ್ಲಿಲ್ವಂತೆ ಸಾರ್ ಎಂದರೆ, ನೋಡೋಣ ಮಾತನಾಡುತ್ತೇನೆ. ನಿಮಗೆ ಅನುಮಾನ ಇದ್ದರೆ ಆ ಭಾಗದ ಡಿಟಿ ಅವರಿಂದ ಮಾಹಿತಿ ಪಡೆದುಕೊಳ್ಳಿ ಎನ್ನುತ್ತಾರೆ.
ಬಾಡಿಗೆ ಮನೆಯಲ್ಲಿ ನಾಡಕಚೇರಿ ಆರಂಭಿಸಲಿ
ಹಂದನಕೆರೆ ನಾಡಕಚೇರಿ ಶಿಥಿಲವಾಗಿದ್ದು, ದುರಸ್ತಿಯಾಗುವ ವರೆಗೂ ಬಾಡಿಗೆ ಮನೆಯಲ್ಲಿ ನಾಡಕಚೇರಿ ಆರಂಭಿಸಿ ನೌಕರರೆಲ್ಲರೂ ಅಲ್ಲೇ ಇರುವಂತೆ ಕ್ರಮವಹಿಸಬೇಕು. ಅದನ್ನು ಬಿಟ್ಟು ಹೋಬಳಿಯ ಜನ ಚಿಕ್ಕನಾಯಕನಹಳ್ಳಿಗೂ, ಗ್ರಾಮಲೆಕ್ಕಿಗರು ಇರುವ ಊರಿಗೂ ಅಲೆಯುವಂತೆ ಮಾಡಿದ್ದಾರೆ. ಅಧಿಕಾರಿಗಳ ರ್ನಿಲಕ್ಷ್ಯದಿಂದ ಬಡವರು ಅಂದಿನ ದಿನಗೂಲಿ ಬಿಟ್ಟು ಕಚೇರಿ ಮುಂದೆ ನಿಲ್ಲುವಂತಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸಬ್ಬೇನಹಳ್ಳಿ ಶ್ರೀನಿವಾಸ್ ಒತ್ತಾಯಿಸಿದರು.
ಮೂಲ ದಾಖಲಾತಿಗಳನ್ನು ಪಡೆಯಲು ನಾಡಕಚೇರಿಗೆ ಹೋದರೆ ಇಲ್ಲಿಲ್ಲ ಎನ್ನುತ್ತಾರೆ. ಚಿಕ್ಕನಾಯಕನಹಳ್ಳಿ ಕಚೇರಿಗೆ ಬಂದರೆ ಚಿಕ್ಕನಾಯಕನಹಳ್ಳಿ ಪಟ್ಟಣ, ಕಸಬಾ ಹೋಬಳಿ ಸೇರಿ ತಾಲೂಕಿನ ಜನರು ವಿವಿಧ ಕೆಲಸಕ್ಕೆ ಬಂದಿರುವುದರಿಂದ ದಿನಪೂರ್ತಿ ಕಾಯಬೇಕಾಗಿದೆ. ಕೆಲವೊಮ್ಮೆ ಕಾಯ್ದರೂ ಯಾವುದೆ ಕೆಲಸವಾಗದೆ ಮತ್ತೆ ಬರಬೇಕಾದ ಪರಿಸ್ಥಿತಿ ನಿಮಾರ್ಣವಾಗುತ್ತಿದೆ. ಹಾಗಾಗಿ ಹಂದನಕೆರೆ ನಾಡಕಚೇರಿಯಲ್ಲೇ ಹೋಬಳಿ ದಾಖಲಾತಿಗಳು ಸಿಗುವಂತಾಗಲಿ. - ಶಶಿಕುಮಾರ್ ಸ್ಥಳಿಯ, ಹಳ್ಳಿತಿಮ್ಲಾಪುರ ನಾನು ಶೆಟ್ಟಿಕೆರೆ ಹೋಬಳಿಯ ಡಿಟಿ. ಹಂದನಕೆರೆಗೆ ಹೆಚ್ಚುವರಿ ಯಾಗಿ ಕೊಟ್ಟಿ ರುವುದರಿಂದ ವಾರಕ್ಕೊಮ್ಮೆ ಹೋಗಿ ಬರುತ್ತೇನೆ. ಕಟ್ಟಡ ಶಿಥಿಲವಾಗಿರುವುದರಿಂದ ಯಾವುದೇ ಮೂಲ ದಾಖಲೆಗಳನ್ನು ಹಂದನಕೆರೆಯಲ್ಲಿ ಇಟ್ಟಿಲ್ಲ. ಕಟ್ಟಡ ದುರಸ್ತಿಯಾದ ನಂತರವಷ್ಟೇ ಇಡಬಹುದು. ಅಲ್ಲದೆ ನಾನು ಪ್ರಭಾರ ಇರುವುದರಿಂದ ಆರ್ಐ ಮತ್ತು ವಿಎಗೆ ಕಾರ್ಯಸ್ಥಾನದಲ್ಲಿರುವಂತೆ ಹೇಳಲಾಗುವುದಿಲ್ಲ. -ವಿಜಯಕುಮಾರ್,ಪ್ರಭಾರ ಉಪತಹಸೀಲ್ದಾರ್, ಹಂದನಕೆರೆ