ದಿಕ್ಕು ತಪ್ಪಿದ ಪಟ್ಟಣ ಅಭಿವೃದ್ಧಿ ಚರ್ಚೆ

1001492641
ಹೊಳೆನರಸೀಪುರ ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷ ಎಚ್.ಕೆ.ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆದ ಸಮಾನ್ಯ ಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
Published on

ಹೊಳೆನರಸೀಪುರ : ಪಟ್ಟಣದ ಅಭಿವೃದ್ಧಿ ವಿಚಾರವಾಗಿ ಚರ್ಚಿಸಿ ಉತ್ತಮ ತೀರ್ಮಾನ ತೆಗೆದುಕೊಳ್ಳಬೇಕಿದ್ದ ಜೆಡಿಎಸ್ ಚುನಾಯಿತ ಸದಸ್ಯರು ಹಾಗೂ ಕಾಂಗ್ರೆಸ್‌ನ ನಾಮನಿರ್ದೇಶಿತ ಸದಸ್ಯರ ನಡುವೆ ಉಂಟಾದ ವಾಕ್ಸಮರ ಗೊಂದಲದ ಗೂಡಾಗಿ ಪರಿಣಮಿಸಿತು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಎಚ್.ಕೆ.ಪ್ರಸನ್ನ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕುರಿತ ಚರ್ಚೆ ದಿಕ್ಕು ತಪ್ಪಿತು.

ಗಾಂಧೀನಗರ ಬಡಾವಣೆಯಲ್ಲಿ ಅಂಗನವಾಡಿ ನಿರ್ಮಿಸಲು 60 ಅಡಿ ಉದ್ದ ಹಾಗೂ 30 ಅಡಿ ಅಗಲದ ನಿವೇಶನ ನೀಡುವ ವಿಷಯದಲ್ಲಿ ವಾಗ್ವಾದ ಆರಂಭವಾಯಿತು. ಸದಸ್ಯೆ ಸುಧಾನಳಿನಿ ಮಾತನಾಡಿ, ಹೆಚ್ಚು ವಿಸ್ತೀರ್ಣ ನಿವೇಶನ ನೀಡಬೇಕು. ಮಕ್ಕಳು ಆಟವಾಡಲು ವಿಶಾಲ ಜಾಗ ಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯ ತಿಳಿಸಿದರು.

ಆದರೆ ಅಷ್ಟೊಂದು ಜಾಗ ಅಗತ್ಯ ಇದೆಯೇ? ಎಂದ ನಾಮನಿರ್ದೇಶಿತ ಸದಸ್ಯ ಉಮೇಶ್, ಸರ್ಕಾರಿ ಜಾಗ ನೀಡಲು ಇತಿಮಿತಿ ಇರಲಿ ಎಂದರು. ಇದಕ್ಕೆ ಕುಮಾರ್, ಶ್ರೀಧರ್ ಅಸಮಾಧಾನ ಹೊರ ಹಾಕಿದರು. ಮಾತಿನ ಭರದಲ್ಲಿ ಸುಧಾನಳಿನಿ, ನಾವೇನು ಹಿಂಬಾಗಿಲಿನಿಂದ ಪುರಸಭೆ ಪ್ರವೇಶಿಸಿದವರಲ್ಲ ಎಂದರು. ಇದರಿಂದ ಆಕ್ರೋಶಗೊಂಡ ಉಮೇಶ್ ಹಾಗೂ ಕಾಂಗ್ರೆಸ್‌ನ ಭೈರಶೆಟ್ಟಿ(ಮಂಜು) ಸರ್ಕಾರ ನೇಮಿಸಿದ್ದರ ವಿರುದ್ಧ ನಡಾವಳಿ ದಾಖಲಿಸಿಕೊಡಿ ಎಂದು ಗುಡುಗಿದರು. ಸ್ಥಾನದಿಂದ ಎದ್ದ ಸದಸ್ಯರು ಕೆಲಕಾಲ ಕೋಲಾಹಲ ಸೃಷ್ಟಿಸಿದರು. ಅಧ್ಯಕ್ಷ ಎಚ್.ಕೆ.ಪ್ರಸನ್ನ ಮಧ್ಯಪ್ರವೇಶಿಸಿ ಸೂಕ್ತ ಪರಿಶೀಲನೆ ಕೈಗೊಂಡು ತೀರ್ಮಾನಿಸುವುದಾಗಿ ವಾಕ್ಸಮರಕ್ಕೆ ತೆರೆ ಎಳೆದರು.

ಪೇಟೆ ಮೇದಾರ ಬೀದಿಯಲ್ಲಿ ಹಳೆ ಸರ್ಕಾರಿ ಕಟ್ಟಡವೊಂದನ್ನು ತೆರವುಗೊಳಿಸಿ ಹೊಸದಾಗಿ ಮಳಿಗೆ ಸಮುಚ್ಚಯ ನಿರ್ಮಿಸುವ ವಿಚಾರಕ್ಕೂ ಪರಸ್ಪರ ಭಿನ್ನ್ನಾಭಿಪ್ರಾಯಗಳು ವ್ಯಕ್ತವಾದವು. ಈಗಾಗಲೇ 70 ಮಳಿಗೆಗಳು ಖಾಲಿ ಉಳಿದಿವೆ. ಪ್ರತಿಬಾರಿ ಇ-ಹರಾಜು ಕರೆದಾಗಲೂ ವರ್ತಕರಿಂದ ನಕಾರ ವ್ಯಕ್ತವಾಗುತ್ತಿದೆ. ಪಟ್ಟಣದಲ್ಲಿ ಎಲ್ಲೆಡೆ ಅಗತ್ಯಕ್ಕಿಂತ ಹೆಚ್ಚು ಮಳಿಗೆ ನಿರ್ಮಿಸಲಾಗಿದೆ. ಹೊಳೆನರಸೀಪುರ ಹೆಸರು ಬದಲಾಗಿ ಜನತೆ ಮಳಿಗೆಪುರ ಎಂದು ಅಪಹಾಸ್ಯ ಮಾಡುವ ಮಟ್ಟಿನ ಪರಿಸ್ಥಿತಿ ತಲೆದೋರಿದೆ. ಆದ್ದರಿಂದ ಮಳಿಗೆಗಳ ಬದಲಿಗೆ ಪುರಸಭಾ ಕಲ್ಯಾಣ ಮಂಟಪವೋ ಅಥವಾ ಯಾವುದಾದರೂ ಬ್ಯಾಂಕ್, ಸಂಸ್ಥೆಗಳಿಗೆ ಹಾಲ್ ನಿರ್ಮಿಸಿಕೊಡಿ ಎಂದು ಉದಯಕುಮಾರ್ ತಿಳಿಸಿದರು. ಇದರ ಸಾಧಕ-ಬಾಧಕ ಹಾಗೂ ಪಾರ್ಕಿಂಗ್ ಲಭ್ಯತೆ ಇಲ್ಲ ಎಂದು ಜೆಡಿಎಸ್‌ನ ಸದಸ್ಯರು ನಕಾರ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಶಾಸಕರೊಂದಿಗೆ ಸಮಾಲೋಚಿಸುವಂತೆ ಅಧ್ಯಕ್ಷ ಪ್ರಸನ್ನ ವಿಚಾರ ಮುಂದಿಕ್ಕಿದರು.

ಪುರಸಭಾ ವಾಹನವನ್ನು ಚಾಲಕ ಪರವಾನಗಿ ಇದ್ದವರಿಗೆ ಮಾತ್ರ ಚಾಲನೆಗೆ ನೀಡಬೇಕು. ಸಭೆಯಲ್ಲಿ ಮಂಡನೆಗೆ ಇಟ್ಟಿರುವ ವಿಚಾರದಂತೆ ಯುಜಿಡಿ ಸಂಪರ್ಕ ಸಮರ್ಪಕಗೊಳಿಸಲು ಬಳಸುವ ಸಕ್ಕಿಂಗ್, ಜಟ್ಟಿಂಗ್ ಯಂತ್ರಗಳು, ಟಿಪ್ಪರ್ ಹಾಗೂ ಟ್ರಾೃಕ್ಟರ್ ದುರಸ್ತಿಗೆ ಹಣ ವಿನಿಯೋಗಿಸಲು ಸರ್ವ ಸದಸ್ಯರೂ ಒಪ್ಪಿಗೆ ಸೂಚಿಸಿದರು. ಬಡಾವಣೆಗಳ ಕೆಲ ನಿವೇಶನಗಳ ವಿವಾದಿತ ಪ್ರಕರಣಗಳ ಕುರಿತಂತೆ ಈಗಾಗಲೇ ಕೆಳ ಹಂತದ ನ್ಯಾಯಾಲಯಗಳಲ್ಲಿ ಪುರಸಭೆಗೆ ನ್ಯಾಯ ಸಿಕ್ಕಿಲ್ಲ. ಮತ್ತೆ ಹೈಕೋರ್ಟ್‌ನಲ್ಲಿ ದಾವೆ ಹೂಡಲು ವಕೀಲರ ವೃತ್ತಿ ಶುಲ್ಕವಾಗಿ 1 ಲಕ್ಷ ರೂ. ನೀಡಲು ಒಪ್ಪಿಗೆ ಪಡೆಯಲಾಯಿತು.

ಶ್ರೀ ಮಹಾಗಣಪತಿ ಮಹೋತ್ಸವ ಕಾರ್ಯಕ್ರಮಕ್ಕೆ 3 ಲಕ್ಷ ರೂ. ನೀಡಲು ಸದಸ್ಯರು ಒಪ್ಪಿಗೆ ಸೂಚಿಸಿದರು. ಪುರಸಭೆಯ ಕೆಳ ಹಂತದ ವಾಣಿಜ್ಯ ಮಳಿಗೆಯನ್ನು ವರ್ತಕರಿಗೆ ನೀಡಿದ್ದ ಅವಧಿ ಮುಗಿದ ಹಿನ್ನೆಲೆಯಲ್ಲಿ ವಾಪಸ್ ಕಚೇರಿ ವಿಸ್ತರಿಸಲು ಪಡೆಯುವ ಬಗ್ಗೆ ತೀರ್ಮಾನಿಸಲಾಯಿತು.

ಪುರಸಭಾ ಮುಖ್ಯಾಧಿಕಾರಿ ಶಿವಶಂಕರ್, ಕಂದಾಯಾಧಿಕಾರಿ ನಾಗೇಂದ್ರ, ಯೋಜನಾಧಿಕಾರಿ ರಮೇಶ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net