ಪುರುಷ ಪ್ರಯತ್ನದಿಂದ ದುರದೃಷ್ಟ ದಾಟಬೇಕು, ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ವಿವರಣೆ

22sirsi4- SWARNAVALLI SRI
Published on

ಶಿರಸಿ: ಮನುಷ್ಯನ ಜೀವನ ಎನ್ನುವುದು ಒಂದು ರೀತಿಯಲ್ಲಿ ಹೊಯ್ದಾಟ. ನಮ್ಮ ಪ್ರಯತ್ನ, ಈಶ್ವರ ಇಚ್ಛೆ, ಅದೃಷ್ಟ ಇವು ಪರಸ್ಪರ ಕಚ್ಚಾಟ ಮಾಡಿಕೊಳ್ಳುತ್ತಿದ್ದಾರೆ. ನಾವು ಏನೋ ಒಂದನ್ನು ಮಾಡುವುದಕ್ಕೆ ಹೊರಟಿರುತ್ತೇವೆ ಆದರೆ, ಈಶ್ವರನ ಇಚ್ಛೆ ಬೇರೆಯಾಗಿರುತ್ತದೆ ಅಥವಾ ನಮ್ಮ ದುರಾದೃಷ್ಟ ಬೇರೆಯಾಗಿರುತ್ತದೆ. ಎಲ್ಲರ ಜೀವನದಲ್ಲೂ ಇದು ಆಗುತ್ತಲೇ ಇರುತ್ತದೆ. ಈ ಮೂವರ ಪೈಕಿ ಪುರುಷ ಪ್ರಯತ್ನ ಎನ್ನುವುದು ಸನ್ಮಾರ್ಗದಲ್ಲಿ ನಡೆದರೆ, ಅದಕ್ಕೆ ಹೆಚ್ಚಿಗೆ ಬಲ ಬರಲು ಸಾಧ್ಯವಿದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.


ತಮ್ಮ ಹಾಗೂ ಮಠದ ಕಿರಿಯ ಶ್ರೀಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳ ಚಾತುರ್ವಸ್ಯ ವ್ರತಾಚರಣೆಯಲ್ಲಿ ಕಿಸಲವಾಡ ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.


ಪುರುಷ ಪ್ರಯತ್ನಕ್ಕೆ ಹೆಚ್ಚು ಬಲ ಕೊಡುವ ಮೂಲಕ ಇಹ - ಪರದ ಸಾಧನೆಯಲ್ಲಿ ತೊಡಗಬೇಕು. ಪ್ರಯತ್ನಕ್ಕೆ ನಮ್ಮ ಅದೃಷ್ಟ ಒಮ್ಮೊಮ್ಮೆ ಅಡ್ಡಿಯಾಗುವ ಸಂಭವ ಇರುತ್ತದೆ. ಆದರೂ ಪುರುಷ ಪ್ರಯತ್ನದಿಂದ ಅದನ್ನು ದಾಟಬೇಕು. ಹಾಗೆಯೇ ಪರದ ಪ್ರಯತ್ನ. ಪರಲೋಕಿಕವಾಗಿ ಹೆಚ್ಚಿನ ಸಾಧನೆ ಮಾಡಲು ಮನುಷ್ಯರಾಗಿ ಬಂದಿದ್ದೇವೆ ಎಂದರು.


ಆಧ್ಯಾತ್ಮಿಕ ಸಾಧನೆಯ ಕ್ಷೇತ್ರದಲ್ಲೂ ತೊಡಕುಗಳು ಇರುತ್ತವೆ. ಇವುಗಳೆಲ್ಲ ನಮ್ಮ ಹಿಂದಿನ ಜನ್ಮದ ಅದೃಷ್ಟಗಳ ಕಾರಣದಿಂದ ಬರುತ್ತವೆ. ಅವುಗಳನ್ನು ತೀವ್ರವಾದ ಪುರುಷ ಪ್ರಯತ್ನದ ಮೂಲಕ ದಾಟಲು ಸಾಧ್ಯವಿದೆ. ಆತ್ಮ ಶಕ್ತಿ ಎಂದರೆ ನಿರುತ್ಸಾಹ ಮಾಡಿಕೊಳ್ಳದೇ ಮುಂದೆ ಕೆಲಸ ಮಾಡುವಂತಹ ಸಂಕಲ್ಪ ಶಕ್ತಿ. ಅದರಿಂದಲೇ ಅನೇಕ ಸಲ ಗೆಲ್ಲಲು ಸಾಧ್ಯ ಎಂದರು.


ಯೋಗವಾಸಿಷ್ಠ ಗ್ರಂಥವು ಪುರುಷ ಪ್ರಯತ್ನದ ಮಹತ್ವವನ್ನು ದೀರ್ಘವಾಗಿ ಕೊಂಡಾಡುತ್ತದೆ. ನಮ್ಮ ಜೀವನದಲ್ಲಿ ಯಾವುದು ಪ್ರಭಲವೋ ಅದು ಗೆಲ್ಲುತ್ತದೆ. ಯಾವುದು ದುರ್ಲಭವೋ ಅದು ಸೋಲುತ್ತದೆ. ಆದ್ದರಿಂದ ನಮ್ಮ ಪ್ರಯತ್ನವನ್ನು ಪ್ರಭಲವಾಗಿಸಿಕೊಳ್ಳಬೇಕು. ಶಾಸ್ತ›ಗಳು ಇದಕ್ಕೆ ಉಪಾಯಗಳನ್ನು ಹೇಳುತ್ತವೆ. ಆ ಉಪಾಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಪ್ರಯತ್ನವನ್ನು ಬಲಪಡಿಸಿಕೊಳ್ಳಲು ಸಾಧ್ಯವಿದೆ. ನಮ್ಮ ಪ್ರಯತ್ನದಿಂದಲೇ ಕಷ್ಟಗಳನ್ನು ದಾಟಲು ಸಾಧ್ಯವಾಗುತ್ತದೆ. ಪುಣ್ಯ ಮತ್ತು ಪಾಪ ಕರ್ಮ ಇವೆರಡರಲ್ಲಿ ಪಾಪಕರ್ಮವು ನಮಗೆ ಬಾಧಕವಾಗುತ್ತದೆ. ಅವುಗಳನ್ನು ಈಗಿನ ಕರ್ಮಗಳನ್ನು ಮಾಡುವುದರ ಮೂಲಕ ಅದರಿಂದ ಗೆಲ್ಲಬೇಕು ಎಂದರು.


ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ತಮ್ಮ ಸೇವೆ ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆ ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಸೀಮೆಯ ಪ್ರಮುಖರಾದ ವಿಶ್ವನಾಥ ಹೆಗಡೆ, ಪ್ರಶಾಂತ ಭಟ್ಟ, ಗಣಪತಿ ಭಟ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net