

ಸಿದ್ದಾಪುರ: ಇಲ್ಲಿನ ಪಾಲಿಬೆಟ್ಟದ ಕೂತಂಡ ಚಂಗಪ್ಪ ಅವರಿಗೆ ಸೇರಿದ ಕಾಫಿ ತೋಟದಲ್ಲ್ಲಿ ಕಿಡಿಗೇಡಿಗಳು 200ಕ್ಕೂ ಹೆಚ್ಚು ಕರಿಮೆಣಸು ಬಳ್ಳಿಗಳನ್ನು ಕಡಿದು ನಾಶಪಡಿಸಿರುವುದು ಭಾನುವಾರ ಬೆಳಕಿಗೆ ಬಂದಿದೆ.
ಹಲವು ವರ್ಷಗಳಿಂದ ಕಾಫಿ ತೋಟದಲ್ಲಿ ಫಸಲಿನೊಂದಿಗೆ ಬೆಳೆದು ನಿಂತಿದ್ದ ಕರಿಮೆಣಸು ಬಳ್ಳಿಗಳನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಅವರು ಕಾಫಿ ತೋಟಕ್ಕೆ ತೆರಳಿವೀಕ್ಷಿಸಿದರು. ಬಳಿಕ ಮಾತನಾಡಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಕೂತಂಡ ಚಂಗಪ್ಪ ಅವರ ಮಗ ಪೂವಣ್ಣ ಪಾಲಿಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪಾಲಿಬೆಟ್ಟ ಬೆಳೆಗಾರರ ಸಂಘದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ಕೃತ್ಯವನ್ನು ಖಂಡಿಸಿದ್ದು, ತಪ್ಪೆಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.