ಬಂಡಿಹೊಳೆ ಗ್ರಾಮದಲ್ಲಿ ಸರಣಿ ಕಳ್ಳತನ

24-KRP-01
ದುಷ್ಕರ್ಮಿಗಳು ಬಂಡಿಹೊಳೆ ಗ್ರಾಮದ ಅಂಗಡಿ ಮಳಿಗೆಗಳ ಬೀಗ ಮುರಿದಿರುವುದು.
Published on

ಕೆ.ಆರ್.ಪೇಟೆ: ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ದುಷ್ಕರ್ಮಿಗಳು ಅಂಗಡಿ, ಮಳಿಗೆಗಳ ರೋಲಿಂಗ್ ಶೆಲ್ಟರ್ ಮೀಟಿ ಹಾಗೂ ಶಾಲೆ, ಹೋಟೆಲ್‌ಗಳ ಬಾಗಿಲು ಮುರಿದು ಭಾನುವಾರ ರಾತ್ರಿ ಸರಣಿ ಕಳ್ಳತನ ಮಾಡಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.


ಬಂಡಿಹೊಳೆ ಗ್ರಾಮದ ಮಂಬೈ ಮಂಜುನಾಥ್ ಕಾಂಪ್ಲೆಕ್ಸ್‌ನಲ್ಲಿರುವ ಐಯ್ಯಂಗಾರ್ಸ್‌ ಬೇಕರಿಯ ರೋಲಿಂಗ್ ಶೆಲ್ಟರ್ ಮುರಿದು ಒಳನುಗ್ಗಿ 15 ಸಾವಿರ ರೂ. ನಗದು ಹಾಗೂ ಬೇಕರಿ ಐಟಂಗಳನ್ನು ಕಳವು ಮಾಡಿದ್ದಾರೆ. ಶಿವರಾಂ ಅವರ ಮೊಬೈಲ್ ಅಂಗಡಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಏಳೆಂಟು ಮೊಬೈಲ್‌ಗಳನ್ನು ಕಳ್ಳತನ ಮಾಡಿದ್ದಾರೆ. ನಾಗೇಶ್ ಅವರ ಚಿಲ್ಲರೆ ಅಂಗಡಿಗೆ ನುಗ್ಗಿ 15 ಸಾವಿರ ರೂ. ನಗದು, ಸಿಗರೇಟ್ ಪ್ಯಾಕ್‌ಗಳು, ಮಸಾಲೆ ಪದಾರ್ಥಗಳ ಪ್ಯಾಕ್‌ಗಳನ್ನು ಕಳವು ಮಾಡಿದ್ದಾರೆ. ಪ್ರಸನ್ನ ಅವರ ಹೋಟೆಲ್‌ಗೆ ನುಗ್ಗಿ 8 ಸಾವಿರ ರೂ. ನಗದು ಹಾಗೂ ಅಡುಗೆ ಪದಾರ್ಥ ಕಳವು ಮಾಡಿದ್ದಾರೆ. ಅಲ್ಲದೆ ಬಂಡಿಹೊಳೆ ಸುಮೇಧ ಕಾನ್ವೆಂಟ್ ಬಾಗಿಲು ಬೀಗ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಶಾಲೆಯಲ್ಲಿದ್ದ ಕಂಪ್ಯೂಟರ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದಾರೆ.


ದುಷ್ಕರ್ಮಿಗಳು ಕಳ್ಳತನ ಮಾಡುತ್ತಿರುವ ದೃಶ್ಯವು ಮಂಜುನಾಥ್ ಕಾಂಪ್ಲೆಕ್ಸ್‌ನಲ್ಲಿರುವ ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವುದಾಗಿದ್ದು, ಪೊಲೀಸರಿಗೆ ಪ್ರಕರಣ ಭೇದಿಸಲು ಸಹಕಾರಿಯಾಗಲಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ನಿರೀಕ್ಷಕ ಆನಂದೇಗೌಡ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net