ಜಲಜೀವನ್ ಯೋಜನೆಯಲ್ಲಿ ಅವ್ಯವಹಾರದ ಸದ್ದು: ಜಿಪಂ ಸಿಇಒಗೆ ತನಿಖೆಯ ಹೊಣೆ

DSC_0053
Published on

ಮಂಡ್ಯ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಯೋಜನೆ ಜಲಜೀವನ್ ಮಿಷನ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಅವ್ಯವಹಾರ ನಡೆದಿರುವ ಸದ್ದು ಕೇಳಿಬಂದಿದೆ. ಈ ಕುರಿತಂತೆ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗಂಭೀರ ಚರ್ಚೆ ನಡೆಸಿದರು. ಮಾತ್ರವಲ್ಲದೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನರೇಂದ್ರಸ್ವಾಮಿ, ಮಳವಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಕುಡಿಯುವ ನೀರಿನ ಯೋಜನೆ ಈಗಾಗಲೇ ಅನುಷ್ಠಾನಗೊಂಡಿರುವ ಗ್ರಾಮಗಳಲ್ಲಿಯೂ ಜಲಜೀವನ್ ಮಿಷನ್ ಯೋಜನೆ ಮಾಡಲಾಗಿದೆ. ಮಾತ್ರವಲ್ಲದೆ ಕಳಪೆ ಗುಣಮಟ್ಟದ ಕಾಮಗಾರಿ, ಅನಗತ್ಯ ಪೈಪ್‌ಲೈನ್ ಅಳವಡಿಕೆ, ನಲ್ಲಿಗಳಿಗೆ ಮೀಟರ್ ಅಳವಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳವಳ್ಳಿ ತಾಲೂಕಿನ ಬಿ.ಜಿ ಪುರ, ನೆಟ್ಕಲ್ ಭಾಗದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡು ಪ್ರತಿ ಮನೆಗೆ ನೀರು ಪೂರೈಸಲಾಗುತ್ತಿದೆ. ಆದರೂ ಹೆಚ್ಚುವರಿಯಾಗಿ ಅನಗತ್ಯ ಪೈಪ್‌ಲೈನ್ ಅಳವಡಿಕೆ ಮತ್ತು ಕಿರುಗಾವಲು ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿಯಾಗುತ್ತಿರುವಾಗ ಮತ್ತೆ ಜಲಜೀವನ್ ಯೋಜನೆ ಜಾರಿಗೊಳಿಸಿ ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕುಡಿಯುವ ನೀರು ಪೂರೈಸುವ ಅಧಿಕಾರಿ ವರ್ಗ ಮತ್ತು ಗುತ್ತಿಗೆದಾರರು ಹಣ ಕಬಳಿಸಲು ಈ ಹಿಂದೆ ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಆದ್ದರಿಂದ ಇದೊಂದು ಬಹುಕೋಟಿ ರೂ ಹಗರಣವಾಗಿದ್ದು, ಇದರ ಬಗ್ಗೆ ಉನ್ನತ ತನಿಖೆಯಾಗಬೇಕು. ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಂತೆಯೇ ಈ ಮೂಲಕ ನಿವಾಸಿಗಳು ಅನಗತ್ಯವಾಗಿ ನಲ್ಲಿ ಮೀಟರ್ ಬಿಲ್ ಪಾವತಿಸುವ ಪ್ರಕ್ರಿಯೆಗೆ ತಡೆಯೊಡ್ಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಶಾಸಕರಾದ ಕೆ.ಎಂ.ಉದಯ್ ಕದಲೂರು ಮತ್ತು ರಮೇಶ ಬಂಡಿಸಿದ್ದೇಗೌಡ ದನಿಗೂಡಿಸಿದರು. ಸಚಿವರು ಮಧ್ಯ ಪ್ರವೇಶಿಸಿ, ಯೋಜನೆಯಲ್ಲಿ ಮೇಲ್ನೊಟಕ್ಕೆ ಹಣ ದುರ್ಬಳಕೆಯಾಗಿರುವುದು ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಜಿಪಂ ಸಿಇಒ ತನ್ವೀರ್ ಆಸಿಫ್ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಜತೆಗೆ ವರದಿ ಬಳಿಕ ಇಲಾಖೆ ಅಥವಾ ಉನ್ನತಮಟ್ಟದ ತನಿಖೆಗೆ ವಹಿಸುವ ಬಗ್ಗೆ ನಿರ್ಧರಿಸಲಾಗುವುದೆಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net