

ಶಿವಮೊಗ್ಗ: ಕುಡಿಯುವ ನೀರು ಸಂಪರ್ಕ ಕಲ್ಪಿಸುವಲ್ಲಿ ಅವ್ಯವಹಾರ ನಡೆದಿದೆ. ಹಣ ಪಡೆದು ಅಕ್ರಮ ನಲ್ಲಿಗಳನ್ನು ಸಕ್ರಮ ಮಾಡಿಕೊಟ್ಟಿರುವ ಆರೋಪಗಳಿವೆ. ಇನ್ನು ಕೆಲವೆಡೆ ಉಚಿತವಾಗಿ ನಲ್ಲಿ ಸಂಪರ್ಕ ನೀಡಿರುವ ಮಾತುಗಳು ಕೇಳಿಬರುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಈ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ವರದಿ ನೀಡಬೇಕು. ಒಂದು ವೇಳೆ ಅಕ್ರಮ ನಡೆದಿರುವುದು ಹೌದಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ನೀರು ಹಾಗೂ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಸಾರ್ವಜನಿಕವಾಗಿ ಸದಾ ಭ್ರಷ್ಟಾಚಾರದ ಆರೋಪ ಮಾಡುವ, ಅದರ ಬಗ್ಗೆ ತನಿಖೆ ನಡೆಸಬೇಕೆಂದು ಹತ್ತಾರು ಬಾರಿ ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರು ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಮಾರ್ಟ್ ಸಿಟಿ ವಿಷಯ ಬಂದಾಗ ಯಾವುದೇ ರೋಷಾವೇಷ ತೋರಿಸದೇ ಇದ್ದುದು ಕುತೂಹಲ ಮೂಡಿಸಿತು.
ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳುವಾಗ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು. ಅರ್ಧಂಬರ್ಧ ಆಗಿರುವ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಂಡರೆ ಅದರಿಂದ ಪಾಲಿಕೆಗೆ ತೊಂದರೆಯಾಗುತ್ತದೆ. ಇನ್ನೊಂದು ಬಾರಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆಯೇ ಚರ್ಚೆ ನಡೆಸಲು ಪ್ರತ್ಯೇಕ ಸಭೆ ನಡೆಸುತ್ತೇನೆ ಎಂದು ಆ ವಿಷಯದ ಮೇಲಿನ ಚರ್ಚೆಗೆ ಮಧು ಬಂಗಾರಪ್ಪ ವಿರಾಮ ಹಾಕಿದರು.