ಕಿಡಿಗೇಡಿಗಳಿಂದ ಬಸವೇಶ್ವರ ಪ್ರತಿಮೆ ಭಗ್ನ

1020
Published on

ರಾಮದುರ್ಗ: ತಾಲೂಕಿನ ಬಿಚಗುಪ್ಪಿ ಗ್ರಾಮದ ಬಸ್ ನಿಲ್ದಾಣ ಬಳಿಯ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ಕಿಡಿಗೇಡಿಗಳು ಶನಿವಾರ ತಡರಾತ್ರಿ ಭಗ್ನಗೊಳಿಸಿದ್ದು, ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಶಾಸಕ ಮಹಾದೇವಪ್ಪ ಯಾದವಾಡ, ಶಾಂತಿ ಕದಡಲು ಸಮಾಜಘಾತುಕ ಶಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ.

ಸೂಕ್ತ ತನಿಖೆ ನಡೆಸಿ ಕಿಡಿಗೇಡಿಗಳನ್ನು ವಾರದೊಳಗೆ ಬಂಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ತಿಂಗಳ ಒಳಗಾಗಿ ಬಸವೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಕಿಡಿಗೇಡಿಗಳ ಪತ್ತೆಗೆ ಆಗ್ರಹ: ಸಾಮಾಜಿಕ ಸಮಾನತೆಯ ಹರಿಕಾರ ಬಸವೇಶ್ವರ ಮೂರ್ತಿ ಭಗ್ನಗೊಳಿಸಿರುವುದು ಹಿಂದು ಗಳನ್ನು ಮತ್ತು ಬಸವೇಶ್ವರರ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಕಿಡಿಗೇಡಿಗಳನ್ನು ಶೀಘ್ರ ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು.

ಮುಂದೆ ಇಂತಹ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಬಸವಾಭಿಮಾನಿಗಳು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ. ಕಟಕೋಳ ಪಿಐಎಸ್ ಶರಣೇಶ ಜಾಲಿಹಾಳ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net