

ರಾಯಚೂರು: ದೇವಸ್ಥಾನದ ಅರ್ಚಕರು ಹಾಗೂ ಭಕ್ತರೊಂದಿಗೆ ದುರ್ವರ್ತನೆ ತೋರುತ್ತಿರುವ ತಾಲೂಕಿನ ದೇವಸುಗೂರಿನ ಶ್ರೀ ಸೂಗೂರೇಶ್ವರ ದೇವಸ್ಥಾನ ಸಮಿತಿ ದ್ವಿತೀಯ ದರ್ಜೆ ಸಹಾಯಕ ಶ್ರೀಕಾಂತ ಹಡಗಲಿಯನ್ನು ವರ್ಗಾವಣೆ ಮಾಡುವಂತೆ ಸೂಗೂರೇಶ್ವರ ಹಾಗೂ ಮಾತಾ ನಾಗರ ಯಲ್ಲಮ್ಮ ದೇವಿ ದೇವಸ್ಥಾನಗಳ ಪಾರಂಪರಿಕ ಅರ್ಚಕರ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಗುರುವಾರ ಮನವಿ ಸಲ್ಲಿಸಿ, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನ ಎ ಗ್ರೇಡ್ ದೇವಸ್ಥಾನವಾಗಿದ್ದು, ರಾಜ್ಯದ ವಿವಿಧ ಜಿಲ್ಲೆ ಹಾಗೂ ಅನ್ಯ ರಾಜ್ಯಗಳಿಂದ ಭಕ್ತರು ಬರುತ್ತಿದ್ದು, ಶ್ರೀಕಾಂತ ವರ್ತನೆಯಿಂದ ಭಕ್ತರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ದೂರಿದರು.
ದೇವಸ್ಥಾನದಲ್ಲಿ ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ಶ್ರೀಕಾಂತ ದೇವಸ್ಥಾನದ ಸುತ್ತಮುತ್ತಲಿನ ಮನೆಗಳ ಮಹಿಳೆಯರು ಹಾಗೂ ಮಹಿಳಾ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಅರ್ಚಕರು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರೊಂದಿಗೆ ದುರ್ವರ್ತನೆ ತೋರುತ್ತಿದ್ದಾನೆ.
ತನ್ನ ಅಕಾರದ ವ್ಯಾಪ್ತಿ ಮೀರಿ ಎಲ್ಲದರಲ್ಲೂ ಅಕಾರ ಚಲಾಯಿಸಲು ಬರುತ್ತಿರುವ ಶ್ರೀಕಾಂತ ಅರ್ಚಕರ ನಡುವೆ ಕಲಹ ಉಂಟು ಮಾಡಲು ಪ್ರಯತ್ನ ಮಾಡುತ್ತಿದ್ದಾನೆ. ಕೂಡಲೇ ಆತನನ್ನು ವರ್ಗಾವಣೆ ಮಾಡಿ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಅಧ್ಯಕ್ಷ ಬಿ.ಸೂಗಯ್ಯ ಸ್ವಾಮಿ, ಪದಾಕಾರಿಗಳಾದ ಪ್ರಕಾಶಯ್ಯ ನಂದಿ, ಶಾಂತವೀರ ಸ್ವಾಮಿ, ಸಿದ್ದಲಿಂಗಯ್ಯ ಸ್ವಾಮಿ, ಮರುಳಾ ಬಸವರಾಜ, ಸಂತೋಷ ಮಟಮಾರಿ, ಕೆ.ರಮೇಶ, ಸುರೇಶ ಭೃಂಗಿ, ಎಂ.ವೀರೇಶ ಉಪಸ್ಥಿತರಿದ್ದರು.