ಪಂಚ ಗ್ಯಾರಂಟಿಗಳಿಗೆ ಎಸ್ಸಿ, ಎಸ್ಟಿ ಹಣ ದುರ್ಬಳಕೆ

Bommai
Published on

ಶಿಗ್ಗಾಂವಿ: ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ 14 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ದಲಿತರ ಅಭಿವೃದ್ಧಿಗೆ ಬಳಸದೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೊಷಿಸಿರುವ ಐದು ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿಕೊಂಡು ಎಸ್ಸಿ, ಎಸ್ಟಿ ಸಮುದಾಯವನ್ನು ವಂಚಿಸುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮುಖ್ಯಮಂತ್ರಿಗಳು 39 ಸಾವಿರ ಕೋಟಿ ರೂ. ಮೀಸಲಿರುವ ಹಣದಲ್ಲಿ 14 ಸಾವಿರ ಕೋಟಿ ಕಡಿತಗೊಳಿಸಿ ಕೇವಲ 25 ಸಾವಿರ ಕೋಟಿ ಹಣವನ್ನು ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಡುತ್ತಿರುವುದು ಇಲ್ಲಿ ಸ್ಪಷ್ಟವಾಗಿದೆ. ಇದರಿಂದ ಎಸ್ಸಿ, ಎಸ್ಟಿ ಜನಾಂಗಕ್ಕೆ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ. ಕಡಿತಗೊಳ್ಳುತ್ತಿರುವ 14 ಸಾವಿರ ಕೋಟಿ ಹಣವನ್ನು ಬಳಕೆ ಮಾಡಿದರೆ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ, ಕಾಲನಿಗಳ ಅಭಿವೃದ್ಧಿ ಸೇರಿ ಹಲವು ಯೋಜನೆಗಳಡಿ ಈ ಹಣ ಬಳಕೆ ಮಾಡಬಹುದಿತ್ತು, ಆದರೆ, ಸರ್ಕಾರ ಮೀಸಲಿಟ್ಟಿರುವ ಹಣವನ್ನು ಕಡಿತಗೊಳಿಸಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಚುನಾವಣೆ ಸಂದರ್ಭದಲ್ಲಿ ಎಸ್ಸಿ, ಎಸ್ಟಿಗೆ ಮೀಸಲಿರುವ ಹಣ ವರ್ಗಾವಣೆ ಮಾಡುವ 7ಡಿ ಕಾನೂನನ್ನು ರದ್ದು ಮಾಡುವ ಭರವಸೆ ನೀಡಿದ್ದರು. ಮೀಸಲಾಗಿರುವ ಹಣವನ್ನು ಅವರಿಗೆ ಬಳಕೆ ಮಾಡಿಕೊಳ್ಳಲು ಹೆಚ್ಚಿನ ಅನುಕೂಲ ಕಲ್ಪಿಸಿ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಸರ್ಕಾರ ಬಂದು ಒಂದು ವರ್ಷ ಕಳೆದರೂ 7ಡಿ ಕಾನೂನನ್ನು ರದ್ದು ಮಾಡಿಲ್ಲ ಎಂದು ದೂರಿದರು.

ಸರ್ಕಾರ ತಕ್ಷಣವೇ ಹಿಂದುಳಿದವರ ಅಭಿವೃದ್ಧಿಗೆ ಮೀಸಲಿರುವ ಹಣವನ್ನು ಅವರಿಗಾಗಿಯೇ ಮೀಸಲಿಟ್ಟು, ತಮ್ಮ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರದ ಮೂಲ ಬಜೆಟ್​ನಲ್ಲಿ ಹಣ ಒದಗಿಸಬೇಕು ಎಂದರು.

ಡಿಎಚ್​ಒ ವರ್ಗಾಯಿಸಿ

ಜಿಲ್ಲೆಯಲ್ಲಿ ಡೆಂಘೆ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿರುವುದಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದೇ ಮುಖ್ಯ ಕಾರಣ. ಕೂಡಲೇ ಇಲ್ಲಿನ ಡಿಎಚ್​ಒ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು. ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿಯೂ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡುವಂತಾಗಿದೆ. ತಾಲೂಕು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಎಂದು ಕಾಣುತ್ತಿದೆ. ಸರ್ಕಾರ ಮತ್ತು ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಜನರ ಆರೋಗ್ಯದತ್ತ ಗಮನಹರಿಸಬೇಕಿದೆ ಎಂದರು.

ರಾಜಕೀಯ ಪುನರ್ಜನ್ಮ

ಶಿಗ್ಗಾಂವಿ- ಸವಣೂರಿನ ಜನ ರಾಜಕೀಯವಾಗಿ ನನಗೆ ಪುನರ್ಜನ್ಮ ನೀಡಿ ಬೆಳೆಸಿದ್ದಾರೆ. ಜು. 12ರಿಂದ ಒಂದೂವರೆ ತಿಂಗಳ ಕಾಲ ಧನ್ಯವಾದ ಯಾತ್ರೆ ಕೈಗೊಳ್ಳುವ ಮೂಲಕ ಕ್ಷೇತ್ರದ ಪ್ರತಿ ಹಳ್ಳಿಗೂ ತೆರಳಿ ಜನರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ತಿಳಿಸಿದರು. ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪಕ್ಷದ ಅಭ್ಯರ್ಥಿ ಕುರಿತಂತೆ ಕ್ಷೇತ್ರದಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಪಕ್ಷ ಮತ್ತು ನಾಯಕರು ಅಂತಿಮವಾಗಿ ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿದೆ ಎಂದರು.

ನಿತಿನ್ ಗಡ್ಕರಿ ಜತೆ ಹೆದ್ದಾರಿ ಕಾಮಗಾರಿ ಚರ್ಚೆ

ಹಾವೇರಿ ವಿಭಾಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಳಿ ಮಾತನಾಡಿದ್ದು, ಈ ಬಗ್ಗೆ ರ್ಚಚಿಸಲು ಅವರು ಮುಂದಿನ ವಾರ ವಿಶೇಷ ಸಮಯ ನೀಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಆಮೆಗತಿಯಲ್ಲಿ ನಡೆಯುತ್ತಿರುವ ಎನ್​ಎಚ್ 4 ಕಾಮಗಾರಿ ಹಾಗೂ ಹಾನಗಲ್ಲ, ಶಿಗ್ಗಾಂವಿ, ಸವಣೂರು, ಲಕ್ಷೆ್ಮೕಶ್ವರ, ಗದಗ ಮಾರ್ಗವಾಗಿ ಹಾಯ್ದು ಹೋಗುವ ಇಳಕಲ್ ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವ ಯೋಜನೆ, ರಿಂಗ್ ರಸ್ತೆಗಳ ನಿರ್ವಣ, ಆರ್​ಒಬಿ ನಿರ್ಮಾಣ ಮಾಡುವ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದೇನೆ. ಈ ಎಲ್ಲ ವಿಷಯಗಳ ಕುರಿತು ಅಧಿಕಾರಿಗಳ ಸಭೆ ಕರೆದು ರ್ಚಚಿಸಿ ಅಗತ್ಯ ಸಹಕಾರ ನೀಡುವುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ತಿಳಿಸಿದರು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜತೆಗೂ ಶಿವಮೊಗ್ಗ-ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕುರಿತು ಚರ್ಚೆ ನಡೆಸಲಾಗಿದೆ. ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈ ಯೋಜನೆ ಹಾಗೂ ಯಲವಿಗಿ-ಗದಗ ರೈಲು ಯೋಜನೆಯನ್ನು ಪ್ರಾರಂಭ ಮಾಡುವಂತೆ ಮನವಿ ಮಾಡಿರುವುದಾಗಿ ಬೊಮ್ಮಾಯಿತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net