ತಹಸೀಲ್ದಾರ್ ಕಚೇರಿ ಶೌಚಗೃಹ ದುರಸ್ತಿ ಹೆಸರಲ್ಲಿ ಹಣ ದುರ್ಬಳಕೆ

TOILET Ranebennur
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಗ್ರಾಮೀಣ ಭಾಗದಲ್ಲಿ ಜನರು ಹೊಸ ಶೌಚಗೃಹ ನಿರ್ವಿುಸಿಕೊಳ್ಳಲು ಸ್ವಚ್ಛ ಭಾರತ ಅಭಿಯಾನದಡಿ ಸರ್ಕಾರ ಸಾಮಾನ್ಯ ವರ್ಗದವರಿಗೆ 12 ಸಾವಿರ ರೂ., ಎಸ್​ಸಿಎಸ್​ಟಿ ವರ್ಗದವರಿಗೆ 20 ಸಾವಿರ ರೂ. ನಿಗದಿಪಡಿಸಿದೆ. ಅಷ್ಟರಲ್ಲಿ ಅವರು ಸುಸಜ್ಜಿತ ಶೌಚಗೃಹ ನಿರ್ವಿುಸಿಕೊಳ್ಳಬೇಕು.

ಆದರೆ, ನಗರದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿಯಲ್ಲಿರುವ 2.50 ಮೀಟರ್ ಉದ್ದ ಹಾಗೂ 3.30 ಮೀಟರ್ ಅಗಲವಿರುವ ಶೌಚಗೃಹ ದುರಸ್ತಿಗೆ ಅಧಿಕಾರಿಗಳು ಬರೋಬ್ಬರಿ 2.50 ಲಕ್ಷ ರೂ. ಖರ್ಚು ಮಾಡಿದ್ದಾರೆ! ಇದು ಅಚ್ಚರಿ ಎನಿಸಿದರೂ ಸತ್ಯ.

2021-22ನೇ ಆರ್ಥಿಕ ವರ್ಷದ ಅನುದಾನದಡಿ 2022ರ ಮಾರ್ಚ್​ನಲ್ಲಿ ಹಾವೇರಿ ನಿರ್ವಿುತಿ ಕೇಂದ್ರದಿಂದ ಕಾಮಗಾರಿ ಮಾಡಲಾಗಿದೆ. ವಿದ್ಯುತ್ ವೈರಿಂಗ್​ಗೆ 18 ಸಾವಿರ ರೂ., ಕೈತೊಳೆಯುವ ತೊಟ್ಟಿ ಹಾಗೂ ಪೈಪ್ ಅಳವಡಿಕೆಗೆ 38 ಸಾವಿರ ರೂ., ಇನ್ನುಳಿದ ಅನುದಾನದಲ್ಲಿ ಟೈಲ್ಸ್, ಫೈಬರ್ ಬಾಗಿಲು ಅಳವಡಿಕೆ ಸೇರಿ ಒಟ್ಟು 2.50 ಲಕ್ಷ ರೂ. ಖರ್ಚು ಮಾಡಿದ್ದಾರೆ. ಕಾಮಗಾರಿ ಮಾಡಿರುವ ಹಣವನ್ನು ಹಾವೇರಿ ನಿರ್ವಿುತಿ ಕೇಂದ್ರದ ಗುತ್ತಿಗೆದಾರರಿಗೆ ಸಂದಾಯ ಮಾಡಲಾಗಿದೆ.

ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಬಳಸುವ ಶೌಚಗೃಹ ಎಷ್ಟು ಚಿಕ್ಕದಿದೆ ಎಂದರೆ ಒಬ್ಬರು ಒಳಗೆ ಹೋಗಿ ಅವರು ಹೊರಗೆ ಬರುವ ತನಕ ಮತ್ತೊಬ್ಬರು ಹೊರಗೆ ನಿಲ್ಲಬೇಕು. ಇಷ್ಟು ಚಿಕ್ಕ ಶೌಚಗೃಹ ದುರಸ್ತಿಗೆ ಲಕ್ಷಾಂತರ ರೂ. ಖರ್ಚು ಮಾಡಿರೋದು ಜನರ ಹುಬ್ಬೇರಿಸುವಂತೆ ಮಾಡಿದೆ.

20-30 ಸಾವಿರ, ಹೆಚ್ಚೆಂದರೆ 50 ಸಾವಿರ ರೂ. ವೆಚ್ಚದಲ್ಲಿ ಹೊಸ ಶೌಚಗೃಹ ನಿರ್ವಿುಸಲು ಸಾಧ್ಯ ಎನ್ನುವುದೊಂದು ಸಾಮಾನ್ಯ ಲೆಕ್ಕಾಚಾರ. ಆದರೆ, ತಹಸೀಲ್ದಾರ್ ಕಚೇರಿಯ ಶೌಚಗೃಹ ‘ದುರಸ್ತಿ’ ಅಥವಾ ನವೀಕರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ನಿತ್ಯವೂ ತಹಸೀಲ್ದಾರ್ ಕಚೇರಿಗೆ ಸಾವಿರಾರು ಜನ ಬಂದು ಹೋಗುತ್ತಾರೆ. ಅವರಿಗೆ ಮೂತ್ರ ವಿಸರ್ಜನೆಗೂ ಜಾಗವಿಲ್ಲ. ಇಂಥ ಸಮಯದಲ್ಲಿ ಅಧಿಕಾರಿಗಳು ತಮ್ಮ ಕಚೇರಿಯ ಶೌಚಗೃಹಕ್ಕೆ ಇಷ್ಟೊಂದು ಹಣ ಖರ್ಚು ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ವಿವಿಧೆಡೆ 22.50 ಲಕ್ಷ ರೂ. ಖರ್ಚು

2021-22ನೆ ಸಾಲಿನ ಆರ್ಥಿಕ ವರ್ಷದ ಅನುದಾನದಡಿ ರಾಣೆಬೆನ್ನೂರ ಮಾತ್ರವಲ್ಲದೆ ಜಿಲ್ಲೆಯ ಸವಣೂರ ಉಪ ವಿಭಾಗಾಧಿಕಾರಿ ಕಚೇರಿ, ಸವಣೂರ ತಹಸೀಲ್ದಾರ್ ಕಚೇರಿ, ಹಾವೇರಿ, ಹಿರೇಕೆರೂರ, ಶಿಗ್ಗಾಂವಿ, ಹಾನಗಲ್ಲ, ರಟ್ಟಿಹಳ್ಳಿ ಹಾಗೂ ಬ್ಯಾಡಗಿ ಸೇರಿ ಒಟ್ಟು 1 ಉಪ ವಿಭಾಗಾಧಿಕಾರಿ ಕಚೇರಿ ಹಾಗೂ 8 ತಹಸೀಲ್ದಾರ್ ಕಚೇರಿಯ ಶೌಚಗೃಹ ದುರಸ್ತಿಗೆ ತಲಾ ಒಂದಕ್ಕೆ 2.50 ಲಕ್ಷ ರೂ.ನಂತೆ 22.50 ಲಕ್ಷ ರೂ. ಕಾಮಗಾರಿಗೆ (ಅಂದಿನ) ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದರು. ಆದರೆ, ಎಲ್ಲೆಡೆ ಅನುದಾನ ದುರ್ಬಳಕೆ ಆಗಿರುವ ಶಂಕೆಯಿದ್ದು, ಸರ್ಕಾರ ತನಿಖೆ ನಡೆಸಿದರೆ ಭ್ರಷ್ಟಾಚಾರದ ಅನುಮಾನಕ್ಕೆ ಸ್ಪಷ್ಟವಾದ ಪರಿಹಾರ ಸಿಗಲಿದೆ.

ತಹಸೀಲ್ದಾರ್ ಕಚೇರಿಯ ಶೌಚಗೃಹ ದುರಸ್ತಿಗೆ ಖರ್ಚು ಮಾಡಿದ ಹಣದಲ್ಲಿ ಹೊಸದಾಗಿ ಶೌಚಗೃಹ ನಿರ್ವಿುಸಬಹುದು. ಅಲ್ಲಿ ನಡೆದಿರುವ ಕಾಮಗಾರಿ ನೋಡಿದರೆ ಹಣ ದುರ್ಬಳಕೆ ಆಗಿರುವ ಬಲವಾದ ಶಂಕೆ ಉದ್ಭವಿಸುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಯವರು ಕಾಮಗಾರಿ ಕುರಿತು ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸಾರ್ವಜನಿಕರಿಗೆ ತಿಳಿಸಬೇಕು. | ಶ್ರೀನಿವಾಸ ಮೈದೂರ, ಸ್ಥಳೀಯ ನಿವಾಸಿ ನಾನು ಇಲ್ಲಿಗೆ ಹೊಸದಾಗಿ ಬಂದಿದ್ದೇನೆ. ಶೌಚಗೃಹ ದುರಸ್ತಿಗೆ 2.50 ಲಕ್ಷ ರೂ. ಖರ್ಚು ಆಗಿರುವ ಮಾಹಿತಿಯಿದೆ. ಇದು ಈ ಹಿಂದಿನ ತಹಸೀಲ್ದಾರರು ಇದ್ದಾಗ ಆಗಿರುವ ಕಾಮಗಾರಿ. | ಎಚ್.ಎನ್. ಶಿರಹಟ್ಟಿ, ತಹಸೀಲ್ದಾರ್ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net