

ಮೈಸೂರು: ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಹಣ ದುರುಪಯೋಗದ ಸಾಕಷ್ಟು ಪ್ರಕರಣಗಳು ಕಂಡು ಬರುತ್ತಿದ್ದು, ದುರು ಪಯೋಗ ಪ್ರಕರಣಗಳಲ್ಲಿ ಕಾಲವಿಳಂಬ ಮಾಡದೆ ಹಣ ವಸೂಲಾತಿಗೆ ಕಟ್ಟುನಿಟಿನ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಹಕಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೈಸೂರು ಪ್ರಾಂತದ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಣ ದುರುಪಯೋಗಪಡಿಸಿಕೊಂಡ ವ್ಯಕ್ತಿ ಎಷ್ಟೇ ಪ್ರಭಾವಿಯಾದರೂ ಕ್ರಮ ಕೈಗೊಳ್ಳಿ. ಹಣ ದುರುಪಯೋಗವನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಗರಣದಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು. ಅಂತಹ ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರೆಸಬಾರದು. ಒಂದುವೇಳೆ ಅಧಿಕಾರಿ ನಿವೃತ್ತರಾದರೂ ಕಾನೂನು ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು.
ದುರುಪಯೋಗ ಪ್ರಕರಣ ಸಣ್ಣದ್ದೇ ಇರಲಿ ಅಥವಾ ದೊಡ್ಡದ್ದೇ ಇರಲಿ ಎಲ್ಲದಕ್ಕೂ ಕ್ರಮ ಆಗಬೇಕು. ಸಣ್ಣ ಪ್ರಕರಣ ಎಂದು ನಿರ್ಲಕ್ಷೃ ತೋರುವುದು ಸರಿಯಲ್ಲ. ಸಾಕಷ್ಟು ಪ್ರಕರಣಗಳಲ್ಲಿ ಅಧಿಕಾರಿಗಳು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ನಿರ್ಲಕ್ಷೃ ವಹಿಸುತ್ತಿದ್ದು, ಇದರಿಂದ ಹಲವು ಪ್ರಕರಣಗಳಲ್ಲಿ ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕ್‌ಗಳಿಗೆ ಸೋಲುಂಟಾಗುತ್ತಿದೆ. ಈ ರೀತಿ ಇನ್ನು ಮುಂದೆ ನಿರ್ಲಕ್ಷೃ ತೋರಬಾರದು. ಹಣ ದುರುಪಯೋಗ ಪ್ರಕರಣದಲ್ಲಿ ಯಾರ ಮೇಲಾದರು ಕ್ರಿಮಿನಲ್ ಪ್ರಕರಣ ದಾಖಲಿಸುವುದು ಬಿಟ್ಟು ಹೋಗಿದ್ದಲ್ಲಿ ಕೂಡಲೇ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಹಣ ದುರುಪಯೋಗಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳು ಎರಡು ದಶಕಳು ಕಳೆದರೂ ಇನ್ನೂ ಇತ್ಯರ್ಥವಾಗಿಲ್ಲ. ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಕ್ರಮ ವಹಿಸಬೇಕು. ದುರುಪಯೋಗ ಪ್ರಕರಣಗಳ ಹಣ ವಸೂಲಾತಿಗೆ ಆದ್ಯತೆ ನೀಡಬೇಕು. ಸಾಲ ವಿತರಣೆ ಮಾಡುವ ಸಂದರ್ಭ ಎರಡು ಹಂತದ ಪರಿಶೀಲನೆ ನಡೆಸಬೇಕು. ಈ ರೀತಿ ಪರಿಶೀಲನೆ ನಡೆಸಿದರೆ ಹಣ ದುರುಪಯೋಗ ತಡೆಗಟ್ಟಬಹುದು. ಹಣ ದುರುಪಯೋಗ ಪ್ರಕರಣಗಳು ಹೆಚ್ಚಾದರೆ ಜನರು ಸಹಕಾರ ಸಂಸ್ಥೆಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ. ಅಂತಹ ವಾತಾವರಣ ನಿರ್ಮಾಣಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು. ಹಣ ದುರುಪಯೋಗ ಪ್ರಕರಣಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಹಕಾರಿ ವ್ಯವಸ್ಥೆಯಡಿ ಜನೌಷಧ
ಜನೌಷಧ ಕೇಂದ್ರವನ್ನು ಸಹಕಾರಿ ಸಂಘಗಳ ಸಹಯೋಗದೊಂದಿಗೆ ತೆರೆಯಲು ಪ್ರಾಯೋಗಿಕ ಪರೀಕ್ಷೆ ಮಾಡಲಾಗುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಡಿಸೆಂಬರ್ ಅಂತ್ಯದೊಳಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ತೆರೆಯಬೇಕು ಎಂದು ನಿರ್ದೇಶನ ನೀಡಿದರು.
ಅರ್ಹರಿಗೆ ಸಾಲ ಸೌಲಭ್ಯ ನೀಡಿ
ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕ್‌ಗಳು ರೈತರು ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಾಲ ಸೌಲಭ್ಯ ನೀಡಬೇಕು. ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಾಲ ಸೌಲಭ್ಯದಿಂದ ವಂಚಿತರಾಗಬಾರದು. ಹಾಗಾಗಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಮಾಹಿತಿಯನ್ನು ಸಹ ಪಡೆದುಕೊಳ್ಳಬೇಕು. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆಯದೆ ಇದ್ದರೆ ಅಂತಹವರಿಗೆ ಸಾಲ ನೀಡಲು ಕ್ರಮ ವಹಿಸಬೇಕು ಎಂದು ಸಚಿವ ಕೆ.ಎನ್. ರಾಜಣ್ಣ ನಿರ್ದೇಶನ ನೀಡಿದರು.
ಸಹಕಾರ ಇಲಾಖೆ ನಿಬಂಧಕ ಕ್ಯಾಪ್ಟನ್ ರಾಜೇಂದ್ರ, ಅಪರ ನಿಬಂಧಕರಾದ ಲಿಂಗರಾಜು, ಆಶಾ, ಪ್ರಕಾಶ್ ರಾವ್, ಜಂಟಿ ನಿರ್ದೇಶಕ ಡಾ.ಜಿ. ಉಮೇಶ್ ಹಾಗೂ ಇತರರು ಇದ್ದರು.