ಕಡಬ: ಕುಟ್ರುಪಾಡಿ ಗ್ರಾಪಂ 2013-14ನೇ ಸಾಲಿನ ಕಾರ್ಮಿಕ ನಿಧಿ ದುರುಪಯೋಗದ ವಿಚಾರ ಗ್ರಾಮಸಭೆಯಲ್ಲಿ ಚರ್ಚೆ ನಡೆದು ಮುಂದಿನ ಸಭೆ ಒಳಗಡೆ ದುರುಪಯೋಗ ಎಸಗಿದ ಅಧಿಕಾರಿಯಿಂದ ಹಣ ವಸೂಲಾತಿ ಮಾಡುವ ಬಗ್ಗೆ ಗ್ರಾಮಸ್ಥರೊಬ್ಬರು ಆಗ್ರಹಿಸಿದರು. ನೋಡೆಲ್ ಅಧಿಕಾರಿಯಾಗಿದ್ದ ತಾಪಂ ಕಾರ್ಯನಿರ್ವಾಹಣಾಧಿಕಾರಿ ಮುಂದಿನ ಗ್ರಾಮಸಭೆಯೊಳಗೆ ಹಣ ವಸೂಲು ಮಾಡುವ ಭರವಸೆ ನೀಡಿದ ಬಳಿಕ ಗ್ರಾಮಸಭೆ ಮುಂದುವರಿಯಿತು.
ಗ್ರಾಪಂ ಅಧ್ಯಕ್ಷ ಮೋಹನ್ ಕೆರೆಕೋಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಾಪಂ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ನೋಡೆಲ್ ಅಧಿಕಾರಿಯಾಗಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಆನಂದ ಗೌಡ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಮ್ಯಾಥ್ಯೂ ಟಿ.ಎಂ., ಕಳೆದ ಗ್ರಾಮಸಭೆಯಲ್ಲಿ ನಿರ್ಣಯ ಮಾಡಿದಂತೆ ದುರುಪಯೋಗವಾಗಿರುವ ಕಾರ್ಮಿಕ ನಿಧಿ ಪಂಚಾಯಿತಿಗೆ ಪಾವತಿಸಲಾಗಿದೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಪಿಡಿಒ ಆನಂದ, ಫಲಾನುಭವಿ ಕಾರ್ಮಿಕ ನಿಧಿ ಪಾವತಿಸಿದ್ದಾರೆ. ಆದರಲ್ಲಿ ಹಿಂದಿನ ಪಿಡಿಒ ಮಾತ್ರ ಪಾವತಿಸಿಲ್ಲ ಎಂದರು. ಇದಕ್ಕೆ ಆಕ್ರೋಶಗೊಂಡ ಮ್ಯಾಥ್ಯೂ ಟಿ.ಎಂ., ಆಗಿನ ಪಿಡಿಒ ಇದೀಗ ನಿವೃತ್ತರಾಗಿದ್ದಾರೆ. ಇನ್ನು ಯಾವಾಗ ಅವರಿಂದ ವಸೂಲು ಮಾಡುತ್ತೀರಿ? ಎಂದರು. ಇದಕ್ಕೆ ಇಒ ಮುಂದಿನ ಗ್ರಾಮಸಭೆಯೊಳಗೆ ವಸೂಲಿ ಮಾಡುತ್ತೇವೆ ಎಂದರು.
ಆಸ್ಪತ್ರೆಯಲ್ಲಿ ಉಡಾಫೆ ವರ್ತನೆ: ಕಡಬ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್ ಇಲಾಖಾ ಮಾಹಿತಿ ನೀಡಿದ ಬಳಿಕ ಗ್ರಾಮಸ್ಥರೊಬ್ಬರು ಆರೋಪಿಸಿ, ಸಮುದಾಯ ಆಸ್ಪತ್ರೆಯಲ್ಲಿ ರೋಗಿ ಹಾಗೂ ಸಾರ್ವಜನಿಕರೊಂದಿಗೆ ಸಿಬ್ಬಂದಿ ಸಮರ್ಪಕವಾಗಿ ವರ್ತಿಸುತ್ತಿಲ್ಲ, ಉಡಾಫೆ ಮಾತನಾಡುತ್ತಿದ್ದಾರೆ ಎಂದಾಗ, ಪರಿಶೀಲನೆ ನಡೆಸಿ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ ಎಂದು ಸುಚಿತ್ರಾ ರಾವ್ ತಿಳಿಸಿದರು. ಇದೇ ವೇಳೆ ಆಸ್ಪತ್ರೆಯಲ್ಲಿ ಯಂತ್ರ, ಸಲಕರಣೆ ಇದ್ದರೂ ಟೆಕ್ನೀಶಿಯನ್ ಕೊರತೆಯಿಂದ ಸಾರ್ವಜನಿಕರಿಗೆ ಸರಿಯಾದ ಸೇವೆ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಬಲ್ಯ ಶಾಲೆ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥ ಧನಂಜಯ ಕೊಡಂಗೆ ಆಗ್ರಹಿಸಿದರು.
ವಿವಿಧ ಇಲಾಖೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ವಾಣಿನಾಗೇಶ್, ಸದಸ್ಯರಾದ ಸಂತೋಷ್ ದೋಳ, ವಿಜಯಾ ಡಿ., ಲಕ್ಷ್ಮೀಶ ಬಂಗೇರ, ಮೀನಾಕ್ಷಿ ಕೂಡೋಲ್ತಡ್ಡ, ಯಶೋದಾ ಕೆ.ಆರ್., ರಮೇಶ್ ಪಿ., ಸ್ವಪ್ನಾ ಪಿ.ಜೆ., ಕಿರಣ್ ಗೋಗಟೆ, ಮಾಧವಿ, ಮಹಮ್ಮದ್ ಆಲಿ, ಮೋಹಿನಿ, ಸುಧೀರ್ ದೇವಾಡಿಗ, ಸುಮನಾ, ಸುಧೇಶ್ ಬೀರುಕ್ಕು, ಮೀನಾಕ್ಷಿ ನೆಲ್ಲ ಉಪಸ್ಥಿತರಿದ್ದರು. ಗುಮಾಸ್ತ ಜಿತೇಶ್ ಕುಮಾರ್ ವರದಿ ಮಂಡಿಸಿ, ಸಿಬ್ಬಂದಿ ತಾರಾನಾಥ, ಉಮೇಶ್, ಜನಾರ್ದನ, ಚಂದ್ರಾವತಿ ಸಹಕರಿಸಿದರು.