

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಅನುದಾನ ಇಲ್ಲ. ಆದರೆ ಅರಳಿಯ ಘನತ್ಯಾಜ್ಯ ಘಟಕದಲ್ಲಿ ಲಕ್ಷಾಂತರ ರೂ. ಸುರಿದು ಸರ್ಕಾರದ ಹಣ ದುರುಪಯೋಗವಾಗುತ್ತಿದೆ. ಅಲ್ಲಿ ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದಿಲ್ಲ, ಸಿಬ್ಬಂದಿ ಕೊರತೆ ಇದೆ. ಇದರ ಬಗ್ಗೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
ಹಿರಿಯ ಸದಸ್ಯ ಜಗದೀಶ್ ಡಿ. ಪಟ್ಟಣ ಪಂಚಾಯಿತಿ ಘನತ್ಯಾಜ್ಯ ಘಟದ ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾಪಿಸಿ, ಪ್ರತಿ ಸಲ ಕಸ ವಿಲೇವಾರಿಗೆ ರೂ.3 ಲಕ್ಷ ಇಡುತ್ತಿದ್ದೀರಿ. ಆದರೆ ಅಲ್ಲಿ ಕಸ ಹಾಗೆಯೇ ಇದೆ. ಘನತ್ಯಾಜ್ಯ ಘಟಕಕ್ಕೆ ಲಕ್ಷಾಂತರ ರೂ. ಹಾಕಿ ಸರ್ಕಾರದ ಹಣ ಪೋಲಾಗುತ್ತಿದೆ. ಇಲ್ಲಿ 6 ಮಂದಿ ನೌಕರರಲ್ಲಿ 4 ಮಂದಿ ಮಾತ್ರ ಇದ್ದಾರೆ. ಆದರೆ ವೇತನ ಆರು ಮಂದಿಗೆ ಆಗುತ್ತಿದೆ. ಕಸಕ್ಕೆ ಬೆಂಕಿ ಇಡುವ ಕೆಲಸ ನಡೆಯುತ್ತಿದೆ ಎಂದರು.
ಘನತ್ಯಾಜ್ಯ ಘಟಕದಲ್ಲಿ ಕಸ ಹಾಕಲು ಜಾಗದ ಸಮಸ್ಯೆಯಿದ್ದು, ಇದರ ವಿಸ್ತರಣೆಗೆ ಅನುದಾನ ಬಂದಿದೆ. ಇಲ್ಲಿ ಕಸವನ್ನು ಸಮರ್ಪಕ ನಿರ್ವಹಣೆ ಮಾಡಲಾಗುತ್ತಿದೆ. ಇಲ್ಲಿ ಆರು ಮಂದಿ ಕೆಲಸ ಮಾಡುತ್ತಿದ್ದಾರೆ. ನಿರ್ವಹಣೆ ಟೆಂಡರ್‌ನಲ್ಲಿ ವಹಿಸಿಕೊಂಡವರು ಹಸಿ ಮತ್ತು ಒಣ ಕಸ ಪ್ರತ್ಯೇಕಿಸುತ್ತಾರೆ. ಅವರು ತಿಂಗಳಿಗೆ ರೂ.16 ಸಾವಿರ ಕೊಡುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ರಾಜೇಶ್ ತಿಳಿಸಿದರು.
ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ನಾಲ್ಕೈದು ಕಡೆಗಳಲ್ಲಿ ಜನರೇಟರ್ ಇದೆ. ಅದು ಕಾರ್ಯನಿರ್ವಹಿಸುತ್ತಿಲ್ಲ, ಇದರ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಎಂದು ಜಗದೀಶ್‌ಪ್ರಶ್ನಿಸಿದಾಗ ಉತ್ತರಿಸಿದ ಮುಖ್ಯಾಧಿಕಾರಿ, ನಗರದಲ್ಲಿ ಐದು ಕಡೆಗಳಲ್ಲಿ ಜನರೇಟರ್ ಅಳವಡಿಸಲಾಗಿತ್ತು. ಆದರೆ ಈಗ ನಗರದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಇದರಿಂದ ಇದು ನಿರುಪಯುಕ್ತವಾಗಿದೆ ಎಂದು ತಿಳಿಸಿದರು. ನಗರಕ್ಕೆ ಎರಡು ಜನರೇಟರ್‌ನ್ನು ಇಟ್ಟುಕೊಂಡು ಉಳಿದ ಜನರೇಟರನ್ನು ಏಲಂ ಮಾಡುವ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷ ಜಯಾನಂದ ಗೌಡ ಸಲಹೆ ನೀಡಿದರು.
ಬೆಳ್ತಂಗಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ ದುರಸ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್‌ಕುಮರ್, ಇಂಜಿನಿಯರ್ ಮಹಾವೀರ ಹಾಗೂ ಸದಸ್ಯರು, ನಾಮನಿರ್ದೇಶನ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿ, ಇಂಜಿನಿಯರ್ ಮಹಾವೀರ ವಂದಿಸಿದರು.
ರುದ್ರಭೂಮಿ ಅವ್ಯವಸ್ಥೆ
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರುದ್ರಭೂಮಿಗಳ ಅವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು. ಸದಸ್ಯರ ಜಗದೀಶ್ ವಿಷಯ ಪ್ರಸ್ತಾಪಿದಾಗ ಮಾತನಾಡಿದ ಮುಖ್ಯಾಧಿಕಾರಿ ಈಗಾಗಲೇ ರುದ್ರಭೂಮಿಯ ಒಳಗೆ ಕ್ಲೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದಿಂದ 40 ಲಕ್ಷ ರೂ.ಅನುದಾನ ಇದ್ದು, ಇದರ ಟೆಂಡರ್ ಆಗಿದೆ. ಇದು ಜಿಲ್ಲಾಧಿಕಾರಿ ಹಂತದಲ್ಲಿದ್ದು, ಅದು ಲಾಗಿನ್ ಆದ ಕೂಡಲೇ ಕಾಮಗಾರಿ ನಡೆಸುವುದಾಗಿ ತಿಳಿಸಿದರು.
ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ
ಬೆಳ್ತಂಗಡಿ ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಕುರಿತು ದೀರ್ಘ ಚರ್ಚೆ ನಡೆಯಿತು. ಈಗಾಗಲೇ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಬಗ್ಗೆ ಜನರಲ್ಲಿ, ವರ್ತಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಪ್ರತಿ ಮನೆಗೆ ಬಟ್ಟೆಚೀಲಗಳನ್ನು ಕೊಡುವ ವ್ಯವಸ್ಥೆ ಪಂಚಾಯಿತಿಯಿಂದ ಮಾಡಲಾಗುವುದು. ಪ್ಲಾಸ್ಟಿಕ್ ಚೀಲಗಳನ್ನು ನಗರದಲ್ಲಿ ಬಳಕೆ ಮಾಡದಂತೆ ವರ್ತಕರ ಗಮನಕ್ಕೂ ತರಲಾಗುವುದು, ಪ್ಲಾಸಿಕ್ ಬ್ಯಾಗ್ ಮಾರಾಟ ಮಾಡುವವರು ಬಟ್ಟೆಚೀಲ ಮಾರಾಟ ಮಾಡುವಂತೆ ಮನವರಿಕೆ ಮಾಡುವುದಾಗಿ ಮುಖ್ಯಾಧಿಕಾರಿ ರಾಜೇಶ್ ತಿಳಿಸಿದರು.