

ಚನ್ನರಾಯಪಟ್ಟಣ: ಗ್ಯಾರಂಟಿ ಯೋಜನೆಗಳನ್ನೊಳಗೊಂಡಂತೆ ಅನ್ಯ ಯೋಜನೆಗಳಿಗೆ 2024-25 ಹಾಗೂ 2025-26ನೇ ಸಾಲಿನಲ್ಲಿ ಕೂಡ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಉಪಯೋಗಿಸಲು ಅವಕಾಶ ನೀಡುವ ಮೂಲಕ ಪರಿಶಿಷ್ಟರಿಗೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಅವಕಾಶವನ್ನು ಸರ್ಕಾರ ತಪ್ಪಿಸುತ್ತಿದೆ ಎಂದು ಕದಸಂಸ ಜಿಲ್ಲಾ ಸಂಚಾಲಕ ಆರ್.ಮಂಜುನಾಥ್ ದೂರಿದರು.
ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ 2013ರಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನಬದ್ಧವಾಗಿ ಹೊಂದಲು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸಿದೆ. ಈ ಕಾಯ್ದೆಯ ಕಲಂ 7ಡಿ ಮತ್ತು 7ಸಿ ರಲ್ಲಿ ಕಾಯ್ದೆಯಡಿ ನಿಗದಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಸರ್ಕಾರಗಳು ವಂಚಿಸುತ್ತಿವೆ. 7ಡಿ ಮತ್ತು 7ಸಿ ಕಲಂಗಳನ್ನು ರದ್ದುಪಡಿಸುವಂತೆ ಹಲವಾರು ದಲಿತರ ಹೋರಾಟಗಳ ಫಲದಿಂದ 7ಡಿ ರದ್ದು ಮಾಡಿ 7ಸಿಯನ್ನು ಯಥಾಪ್ರಕಾರ ಉಳಿಸಿಕೊಂಡು ಅನ್ಯಕಾರ್ಯಗಳಿಗೆ ಬಳಸುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗಳ ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬುವ ಮೂಲಕ ದಲಿತರ ಏಳಿಗೆಗಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಂಚಾಲಕ ಎಚ್.ಸಿ.ಮಧು ಮಾತನಾಡಿ, 2023ರ ಚುನಾವಣೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದರಿಂದ ಬಹುತೇಕ ಎಲ್ಲ ಒಳಮೀಸಲಾತಿ ಹೋರಾಟಗಾರರು ಕಾಂಗ್ರೆಸ್ ಅನ್ನು ಬೆಂಬಲಿಸಿದ ಕಾರಣ ಸರ್ಕಾರ ರಚನೆಯಾಗಿರುವುದನ್ನು ಕಾಂಗ್ರೆಸ್ ಮರೆಯಬಾರದು. ಇನ್ನಾದರೂ ಎಚ್ಚೆತ್ತು ಕಲಂ7ಸಿ ರದ್ದುಪಡಿಸಿ ವಿವಿಧ ಇಲಾಖೆಗಳ ಮೂಲಕ ಅನ್ಯ ಯೋಜನೆಗಳಿಗೆ ಅನುದಾನ ನೀಡುತ್ತಿರುವುದನ್ನು ತತ್‌ಕ್ಷಣ ತಡೆಯುವಂತೆ ಒತ್ತಾಯಿಸಿದರು.
ಆ.21ರಂದು 12 ಗಂಟೆಗೆ ಪರಿಶಿಷ್ಟ ಹಣ - ಪರಿಶಿಷ್ಟರಿಗಾಗಿ ಮಾತ್ರ ನೀಡುವಂತೆ ರಾಜ್ಯ ಸಮಿತಿಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ ನೇತೃತ್ವದಲ್ಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿ-2013 ಕಾಯ್ದೆಯ ಸಮರ್ಪಕ ಜಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆ ಧರಣಿಗೆ ತಾಲೂಕಿನ ಎಲ್ಲ ಹಂತದ ಪದಾಧಿಕಾರಿಗಳು, ಕಾರ್ಮಿಕರು, ಪ್ರಗತಿಪರರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ರಮೇಶ್, ರವಿಕುಮಾರ್, ಲಕ್ಷ್ಮಣ್, ಕಿಶೋರ್ ಕುಮಾರ್ ಸಿ.ಎನ್.ರಮೇಶ್ ಇತರರು ಇದ್ದರು.