

| ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಕೋವಿಡ್ ಕಾರಣಕ್ಕೆ ಶಾಲೆಗಳಿಗೆ ರಜೆ ಘೊಷಿಸಿದ್ದರಿಂದ ಮಧ್ಯಾಹ್ನದ ಬಿಸಿಯೂಟ ಬದಲಿಗೆ ವಿದ್ಯಾರ್ಥಿಗಳಿಗೆ ನೇರವಾಗಿ ವಿತರಿಸಬೇಕಿದ್ದ ತೊಗರಿ ಬೇಳೆ ಹೋಟೆಲ್, ಖಾನಾವಳಿ, ಕಿರಾಣಿ ಅಂಗಡಿ ಸೇರಿ ವಿವಿಧೆಡೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ವಿಜಯವಾಣಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಯಲಿಗೆ ಬಂದಿದೆ. ಬಿಸಿಯೂಟಕ್ಕಾಗಿ ಜಿಲ್ಲಾದ್ಯಂತ ಶಾಲೆಗಳಿಗೆ ಸರಬರಾಜು ಆಗುತ್ತಿದ್ದ ಆಹಾರಧಾನ್ಯ, ಅದರಲ್ಲೂ ವಿಶೇಷವಾಗಿ ತೊಗರಿ ಬೇಳೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಬಗ್ಗೆ ವ್ಯಾಪಕ ದೂರು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಜಯವಾಣಿ ಅಕ್ರಮ ಪತ್ತೆ ಹಚ್ಚಲು ಕುಟುಕು ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ವೇಳೆ ಅಕ್ರಮ ದಂಧೆ ನಡೆದಿರುವುದು ಖಚಿತವಾಗಿದೆ.
ಕಾರ್ಯಾಚರಣೆ ವೇಳೆ ಖರೀದಿದಾರರ ಸೋಗಿನಲ್ಲಿದ್ದ ನಮ್ಮ ಪ್ರತಿನಿಧಿಗೆ ತೊಗರಿ ಬೇಳೆ ಡೀಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜಿಲ್ಲೆ ಮಾತ್ರವಲ್ಲ, ರಾಜ್ಯದ ಹಲವೆಡೆ ಇದೇ ರೀತಿಯಲ್ಲಿ ಮಕ್ಕಳ ಅನ್ನಕ್ಕೂ ಕನ್ನ ಹಾಕುವ ಕರಾಳದಂಧೆ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1.83 ಲಕ್ಷ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇದ್ದುದ್ದರಿಂದ ವಿದ್ಯಾರ್ಥಿಗಳಿಗೆ ಅಪೌಷ್ಟಿಕತೆ ಕಾಡಬಾರದೆಂದು ಮನೆ ಮನೆಗೆ ಆಹಾರ ಧಾನ್ಯ ವಿತರಣೆಗೆ ಮಾಡಲಾಗುತ್ತಿದೆ.
ಆದರೆ ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಲವರು ಕಾಳಸಂತೆಯಲ್ಲಿ ತೊಗರಿ ಬೇಳೆ ಮಾರಾಟ ಮಾಡುತ್ತಿದ್ದಾರೆ. ಬಡ ಮಕ್ಕಳ ಹಸಿವು ನೀಗಿಸಬೇಕಿದ್ದ ಬೇಳೆ ಲೂಟಿಕೋರರ ಜೇಬು ತುಂಬಿಸುತ್ತಿದೆ. ಈ ದಂಧೆ ಹಿಂದೆ ದೊಡ್ಡ ಜಾಲ ಅಥವಾ ಫುಡ್ ಮಾಫಿಯಾ ಸಕ್ರಿಯವಾಗಿರುವ ಶಂಕೆ ಮೂಡಿದೆ. ಸಮಗ್ರ ತನಿಖೆ ನಡೆಸಿದ ನಂತರವೇ ಇನ್ನಷ್ಟು ಮಾಹಿತಿ ಬಯಲಿಗೆ ಬರಲಿದೆ.
ಸಿಕ್ಕಿತು ಸರ್ಕಾರಿ ಚೀಲ: ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ವಿತರಿಸಬೇಕಿದ್ದ ಬೇಳೆಕಾಳು ಯಾದಗಿರಿ ನಗರದ ಹೋಟೆಲ್ ಹಾಗೂ ಖಾನಾವಳಿಗಳ ಪಾಲಾಗುತ್ತಿದೆ ಎಂಬುದನ್ನು ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ವ್ಯಕ್ತಿ ಖಚಿತಪಡಿಸಿದ್ದಾನೆ. ಅಲ್ಲದೆ ಈತ ಸರ್ಕಾರಿ ಗೋದಾಮಿನಲ್ಲಿ ಹಮಾಲಿ ಕೆಲಸ ಮಾಡುವಾತ ಎಂಬುದು ತಿಳಿದು ಬಂದಿದೆ. ಇನ್ನು ಇಲ್ಲಿ ಕಾಣಿಸಿದ ತೊಗರಿ ಬೇಳೆ ಚೀಲದ ಮೇಲೆ ಕರ್ನಾಟಕ ಸರ್ಕಾರ ಎಂದು ನಮೂದಾಗಿದ್ದು ಗಮನಾರ್ಹ.
ಕಾಳಸಂತೆಯಲ್ಲಿ ತೊಗರಿ ಬೇಳೆ ಮಾರಾಟ ಮಾಡುತ್ತಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಈ ಬಗ್ಗೆ ಸಮಗ್ರ ವಿಚಾರಣೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
| ಡಾ.ರಾಗಪ್ರಿಯ ಆರ್. ಜಿಲ್ಲಾಧಿಕಾರಿ
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಪ್ಯಾಕೆಟ್ ಮಾಡಿ ಮಕ್ಕಳಿಗೆ ಆಹಾರ ಧಾನ್ಯ ತಲುಪಿಸುತ್ತಿದ್ದೇವೆ. ಸೋರಿಕೆ ಎಲ್ಲಿ ಆಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಸಾರ್ವಜನಿಕರಿಂದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರಧಾನ್ಯ ವಿತರಣೆ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕವಾಗಿ ಮಾಡಲಾಗುವುದು. ಕಾಳಸಂತೆಯಲ್ಲಿ ಮಾರಾಟದ ಆರೋಪ ಬಗ್ಗೆಯೂ ತನಿಖೆ ನಡೆಸಲಾಗುವುದು.
| ಪ್ರಭು ಕಾನನ್ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ