

ದೇವರಹಿಪ್ಪರಗಿ : ಪಟ್ಟಣದ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರೆ ಮಹೋತ್ಸವ ನಾಡಿನ ಮೂಲೆ ಮೂಲೆಯಿಂದ ಬಂದ ಲಕ್ಷಾಂತರ ಭಕ್ತರ ಮಧ್ಯೆ ಸಂಭ್ರಮದಿಂದ ಸೋಮವಾರ ಸಂಪನ್ನವಾಯಿತು.
ಪಟ್ಟಣದ ಹೊರ ವಲಯದಲ್ಲಿರುವ ಮಲ್ಲಯ್ಯನ ದೇವಸ್ಥಾನಕ್ಕೆ ಶುಕ್ರವಾರ ಮೆರವಣಿಗೆಯಲ್ಲಿ ತೆರಳಿದ್ದ ರಾವುತರಾಯನಿಗೆ ಭಕ್ತರಿಂದ ತೆಂಗು, ಬಾಳೆ, ಸಕ್ಕರೆ, ಲೋಬಾನ ನೇವೇದ್ಯ ಅರ್ಪಿಸಿದರು.
ನಾಲ್ಕನೇ ದಿನ ಸೋಮವಾರ ಬೆಳಗ್ಗೆ 7 ಗಂಟೆಗೆ ವಿವಿಧ ಪೂಜಾ ಕೈಂಕರ್ಯ ಮುಗಿಸಿಕೊಂಡು ಲಕ್ಷಾಂತರ ಭಕ್ತರ ‘ಏಳು ಕೋಟಿ ಏಳು ಕೋಟಿ ಏಳುಕೋಟಿ’ ಗೆ ಎಂಬ ಜೈಘೋಷದೊಂದಿಗೆ ಭವ್ಯ ಬಂಡಿ ಮೆರವಣಿಗೆ ನಡೆಯಿತು. ಭಕ್ತರು ರಾವುತರಾಯನಿಗೆ ಭಂಡಾರ, ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮಧ್ಯಾಹ್ನದ ಹೊತ್ತಿಗೆ ಶಿಡಗಟ್ಟಿ ತಲುಪಿದ ನಂತರ ಪಟ್ಟದ ಪೂಜಾರಿ ಕಾರ್ಣಿಕ ನುಡಿದರು. ಸಂಜೆ 5ಕ್ಕೆ ಪಟ್ಟಣದ ಮಧ್ಯಭಾಗದಲ್ಲಿರುವ ಮೂಲ ದೇವಸ್ಥಾನ ತಲುಪಿದ ರಾವುತರಾಯನಿಗೆ ಮುತ್ತೈದೆಯರು, ಹೆಣ್ಣು ಮಕ್ಕಳು ತುಂಬಿದ ಕಳಸದೊಂದಿಗೆ ಆರತಿ ಮಾಡಿದರು.