

ಮದ್ದೂರು: ರಾಷ್ಟ್ರಕವಿ ಕುವೆಂಪು ಅವರು ಆಡಂಬರವನ್ನು ಹೋಗಲಾಡಿಸಲು ಸರಳ ವಿವಾಹವನ್ನು ಮಾಡಿಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ಸರಳತೆಯನ್ನು ರೂಢಿಸಿಕೊಂಡ ಮಹಾನ್ ವ್ಯಕ್ತಿ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಗೌರವ ಮಾರ್ಗದರ್ಶಕ ಪ್ರೊ. ಹನುಮಂತರಾಯಪ್ಪ ಶ್ಲಾಘಿಸಿದರು.
ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಹಾಗೂ ಮಹಿಳಾ ಸರ್ಕಾರಿ ಕಾಲೇಜು ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ನಮ್ಮ ನಡಿಗೆ ವಿಜ್ಞಾನದ ಕಡೆಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಮೂಢ ನಂಬಿಕೆಗಳ ವಿರುದ್ಧ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಅವರು ಆಡಂಬರ ಮದುವೆ, ಮೂಢ ನಂಬಿಕೆಗಳನ್ನು ವಿರೋಧಿಸುತ್ತಾ ಬಂದವರು. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಗೌರವ ಅಧ್ಯಕ್ಷ ಎಂ.ಸಿ.ಬಸವರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮೌಢ್ಯಗಳನ್ನು ಹೋಗಲಾಡಿಸಲು ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಜನರು ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕವಾಗಿ ಚಿಂತಿಸಬೇಕು ಎಂದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, ಮೂಢನಂಬಿಕೆಗಳ ಹೆಸರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಮೋಸಹೋಗುವಂತೆ ಮಾಡುತ್ತಿದ್ದು, ಇದನ್ನು ಹೋಗಲಾಡಿಸಲು ಪರಿಷತ್ತಿನ ವತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ನಿವೃತ್ತ ವಿಜ್ಞಾನ ವಿಷಯ ಪರಿವೀಕ್ಷಕ ನಂಜರಾಜು, ಸಂಪನ್ಮೂಲ ವ್ಯಕ್ತಿ ಲೋಕೇಶ್ ಅವರು ಸಂವಾದ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಂಶುಪಾಲ ಕೆ.ಬಿ.ನಾರಾಯಣ, ಕಾರ್ಯನಿರತ ಪ್ರತಕರ್ತರ ಸಂಘದ ತಾಲೂಕು ಅಧ್ಯಕ್ಷ ಎಂ.ಆರ್.ಚಕ್ರಪಾಣಿ, ಗೌರವಾಧ್ಯಕ್ಷ ಸಿ.ಎಸ್.ಶಂಕರಯ್ಯ, ಗೌರವಾಧ್ಯಕ್ಷೆ ವಸಂತಮ್ಮ, ಉಪಾಧ್ಯಕ್ಷೆ ಪುಷ್ಪಲತಾ, ಸಹಕಾರ್ಯದರ್ಶಿ ಎಸ್.ಮಹದೇವಯ್ಯ, ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ತಾಲೂಕು ಉಪಾಧ್ಯಕ್ಷ ಎಂ.ಸಿ.ಶಿವರಾಜ್, ಜಿಲ್ಲಾ ಸಂಚಾಲಕ ಅಂಬರಹಳ್ಳಿ ಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಸಂತೋಷ್, ಹಿರಿಯ ವಕೀಲರ ಬಾಲರಾಜ್, ಮುಖಂಡರಾದ ಚಲುವರಾಜು, ಮಹೇಶ್, ಪುಟ್ಟಸ್ವಾಮಿ, ಗಂಗಾಧರ್, ಚಿಕ್ಕಣ್ಣ ಇದ್ದರು.