

ಮಂಗಳೂರು: ಹಿಂದೂಗಳಿಗೆಗೆ ನಿರಂತರವಾಗಿ ಅಪಮಾನ ಮಾಡುತ್ತಲೇ ಬಂದಿರುವ ಈ ಸರ್ಕಾರ ಬಡವರ ಹಣವನ್ನು ಲೂಟಿ ಮಾಡುವುದರೊಂದಿಗೆ ರಾಜ್ಯವನ್ನು ಅದಃಪತನಕ್ಕೆ ತಳ್ಳುತ್ತಿದೆ. ಅಲ್ಪಸಂಖ್ಯಾತರ ಓಲೈಕೆಗೆ ಆದ್ಯತೆ ನೀಡುವ ಲಜ್ಜೆಗೆಟ್ಟ ಸರ್ಕಾರ ರಾಜ್ಯದಲ್ಲಿದೆ. ಈ ಸರ್ಕಾರವನ್ನು ಕಿತ್ತೊಗೆಯುವವರೆಗೆ ವಿರಮಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಬುಧವಾರ ಮಂಗಳೂರಿನಲ್ಲಿ ನಡೆದ ಜನಾಕ್ರೋಶ ಯಾತ್ರೆಯನ್ನುದ್ದೇಶಿಸಿ ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ನಂಬರ್ ವನ್ ರಾಜ್ಯವಾಗಿ ಗುರುತಿಸಿಕೊಂಡಿತ್ತು. ಆದರೆ ಕಾಂಗ್ರೆಸ್ ಅವಯಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಭ್ರಷ್ಟಾಚಾರದಲ್ಲಿ ನಂಬರ್ ವನ್ ಆಗಿ ಗುರುತಿಸಿಕೊಂಡಿದೆ. ಇದನ್ನು ಸ್ವತಃ ಕಾಂಗ್ರೆಸ್ ನಾಯಕರೇ ಹೇಳಿಕೊಳ್ಳುತ್ತಿದ್ದಾರೆ. ಅಂತಹ ದುರವಸ್ಥೆಗೆ ಕಾಂಗ್ರೆಸ್ ತಲುಪಿದೆ. ರಾಜ್ಯದಲ್ಲಿರುವುದು ಜನತೆಯ ಸಿಎಂ ಅಲ್ಲ ಬದಲಾಗಿ ಕಾಂಗ್ರೆಸ್ ಸಿಎಂ ಆಗಿ ಸಿದ್ದರಾಮಯ್ಯನವರು ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎಸ್‌ವೈ ಅವಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯದಿಂದ 19,500 ಕೋಟಿ ಅನುದಾನ ಬಿಡುಗಡೆಯಾಗಿದೆ. ಸಿದ್ದರಾಮಯ್ಯವರ ಅವಯಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ಹೇಳಲಿ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ಬಿಜೆಪಿ ಜನಪರವಾದ ಕೆಲಸಗಳಲ್ಲಿ ಹಾಗೂ ಜನಪರ ಹೋರಾಟದಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ನಮ್ಮ ಶಾಸಕರು ಅಧಿವೇಶನದಲ್ಲಿ ನಿರಂತರವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ, ಮತ್ತು ಸಚಿವರು ಎಚ್ಚರವೇ ಆಗಿಲ್ಲ. ಸರ್ಕಾರದ ದುರಾಡಳಿತದ ವಿರುದ್ಧ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅವರ ತಂಡವು ನಿರಂತರ ಹೋರಾಟ ಮಾಡುತ್ತಿದೆ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಚಿವ ಶ್ರೀರಾಮುಲು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎಂಎಲ್‌ಸಿ ರವಿಕುಮಾರ್, ಶಾಸಕ ಸುನಿಲ್ ಕುಮಾರ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಸಿಮೆಂಟ್ ಮಂಜು, ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಚಿವ ಎಸ್.ಅಂಗಾರ, ಮಾಜಿ ಶಾಸಕ ಸಂಜೀವ ಮಟಂದೂರು, ಪ್ರಮುಖರಾದ ಮುನಿಸ್ವಾಮಿ, ಪ್ರೀತಂಗೌಡ, ಉದಯಕುಮಾರ್ ಶೆಟ್ಟಿ, ಶರಣ್, ತಮ್ಮೇಶ್ ಗೌಡ, ಮೋನಪ್ಪ ಭಂಡಾರಿ, ಯೋಗೀಶ್ ಭಟ್, ಪ್ರಶಾಂತ್ ಕರಿಂಜ, ಆಶಾ ತಿಮ್ಮಪ್ಪ, ರಾಜೇಶ್ ಕಾವೇರಿ, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ದ.ಕಜಿಲ್ಲಾಧ್ಯಕ್ಷ ಸತೀಶ್ ಕುಂಪಲ ವಂದಿಸಿದರು.
--------------------
ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ಹೋರಾಟ ಆರಂಭ ಮಾತ್ರ. ರಾಜ್ಯದಲ್ಲಿ ಕಾಂಗ್ರೆಸ್‌ನ್ನು ತೊಲಗಿಸುವವರೆಗೆ ವಿರಮಿಸುವುದಿಲ್ಲ. ಸೋತ ಅಭ್ಯರ್ಥಿಗಳು ಪೊಲೀಸರನ್ನು ತಮ್ಮ ತಾಳಕ್ಕೆ ತಕ್ಕ ಹಾಗೆ ಕುಣಿಸುತ್ತಿದ್ದಾರೆಂದರೆ ಇದಕ್ಕಿಂತ ದೌರ್ಬಾಗ್ಯ ಮತ್ತೊಂದಿಲ್ಲ. ಕಾಂಗ್ರೆಸ್ ಕೃಪಾ ಕಟಾಕ್ಷದಿಂದ ಅಕಾರಿಗಳೂ ತಮ್ಮ ಜವಾಬ್ಧಾರಿ ಮರೆಯುತ್ತಿದ್ದಾರೆ.
-ಕ್ಯಾ.ಬ್ರಿಜೇಶ್ ಚೌಟ, ದ.ಕ ಸಂಸದ
---------------------
ಬಿ.ಎಸ್.ವೈ ಸಿಎಂ ಆಗಿರುತ್ತಿದ್ದರೆ ಕತೆಯೇ ಬೇರೆ
ಪ್ರವೀಣ್ ನೆಟ್ಟಾರ್‌ನ್ನು ಕೊಗೈದ ಆರೋಪಿ ಕೋರ್ಟ್‌ಗೆ ಹಾಜಾರಾಗುವ ವೇಳೆ ಆರೋಪಿಗೆ ದೇಶದ್ರೋಹಿಯೋರ್ವ ಮುತ್ತಿಕ್ಕುತ್ತಾನೆ, ಎಂದರೆ ಕಾಂಗ್ರೆಸ್ ಅವಯಲ್ಲಿ ಎಂತಹ ಸ್ಥಿತಿಗೆ ನಾವು ತಲುಪಿದ್ದೇವೆ ಎಂಬುದು ವೇದ್ಯವಾಗುತ್ತದೆ. ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿರುತ್ತಿದ್ದರೆ ಕತೆಯೇ ಬೇರೆಯಾಗಿರುತ್ತಿತ್ತು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸಂಘರ್ಷದ ಹಾದಿ ಹಿಡಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.