

ಮೈಸೂರು: ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಆದ್ಯತೆ ನೀಡಬೇಕು. ಈ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗ ವತಿಯಿಂದ ಬುಧವಾರ ಆಯೋಜಿಸಿದ್ದ ಅಲ್ಪಸಂ ಖ್ಯಾತ ಸಮುದಾಯದ ಮುಖಂಡರೊಂದಿಗೆ ಕೋಮುಸೌಹಾರ್ದತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಅಲ್ಪಸಂಖ್ಯಾಂತರ ರಕ್ಷಣೆ, ಸಂಸ್ಥೆಗಳ ರಕ್ಷಣೆ ಹಾಗೂ ಮುಖ್ಯವಾಗಿ ಸಂವಿಧಾನ ನೀಡಿರುವ ಹಕ್ಕುಗಳಿಗೆ ತೊಂದರೆಯಾದಾಗ ಅಲ್ಷಸಅಖ್ಯಾತರ ಆಯೋಗ ನಿಮ್ಮ ರಕ್ಷಣೆಗೆ ಬರುತ್ತದೆ. ಸಭೆ ನಡೆಸಿ ನಿಮ್ಮ ಕುಂದು-ಕೊರತೆಗಳನ್ನು ಕೇಳುವುದು ನಮ್ಮ ಕರ್ತವ್ಯ. ಅಲ್ಪಸಂಖ್ಯಾತರ ಸಮಸ್ಯೆಗಳ ಅರಿವು ನಮಗೆ ಇದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಮಾಡುತ್ತಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕೆಲಸಮಾಡುತ್ತಿದ್ದೇವೆ ಎಂದರು.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರಕ್ಕೆ ತೆರಿಗೆ ಸಂಗ್ರಹದಲ್ಲಿ ಸ್ವಲ್ಪ ಕಡಿಮೆಯಾದ ಪರಿಣಾಮ ಆಯೋಗಕ್ಕೆ ನೀಡುತ್ತಿರುವ ಅನುದಾನ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಪ್ರಮಾಣವನ್ನು ಹೆಚ್ಚಿಸುವಂತೆ ಆಯೋಗ ಸರ್ಕಾರದ ಬಳಿ ಮನವಿ ಮಾಡಿಕೊಳ್ಳಲಿದೆ ಎಂದು ಹೇಳಿದರು.
ಜೈನ ಸಮುದಾಯದ ಮುಖಂಡರು ಮಾತನಾಡಿ, ಜೈನರಲ್ಲಿ ದಿಗಂಬರ ಮತ್ತು ಶ್ವೇತಾಂಬರಲ್ಲಿ ಸಾಕಷ್ಟು ಉಪ ಪಂಗಡಗಳು ಇವೆ. ಈ ಉಪ ಪಂಗಡಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳು ಸರ್ಕಾರದ ಗಮನಕ್ಕೆ ಬಂದಿಲ್ಲ. ಗಣತಿ ಇಲಾಖೆ ಉಪ ಪಂಗಡಗಳನ್ನು ಗಣತಿಯಲ್ಲಿ ಪರಿಗಣಿಸಿ ದಾಖಲಿಸಲು ಆಯೋಗ ಸೂಚಿಸಬೇಕು ಎಂದು ಮನವಿ ಮಾಡಿದರು.