ಕೊಡಗಿನಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಅಲ್ಪಸಂಖ್ಯಾತರ ಒಲವು

jasir
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಜಾತ್ಯತೀತ ಜನತಾದಳ ಪರವಾಗಿ ಈ ಬಾರಿ ಬೆಂಬಲ ವ್ಯಕ್ತಪಡಿಸುತ್ತಿದ್ದು, ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು ವಿಶ್ವಾಸ ವ್ಯಕ್ತಪಡಿಸಿದರು.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಲ್ಪಸಂಖ್ಯಾತರಿಗೆ ಯಾವುದೇ ಉನ್ನತ ಹುದ್ದೆ ರಾಷ್ಟ್ರೀಯ ಪಕ್ಷಗಳು ನೀಡುತ್ತಿಲ್ಲ. ಮತಕ್ಕಾಗಿ ಅಲ್ಪಸಂಖ್ಯಾತರನ್ನು ಬಳಕೆ ಮಾಡುತ್ತಿದ್ದಾರೆ. ಜೆಡಿಎಸ್ ಅಲ್ಪಸಂಖ್ಯಾತರಿಗೆ ಅತೀ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಲಿದ್ದು, ವಿರಾಜಪೇಟೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಮಡಿಕೇರಿ ಕ್ಷೇತ್ರದಲ್ಲಿ ನಾಪಂಡ ಮುತ್ತಪ್ಪ ಅವರ ಪರವಾಗಿ ಅಲ್ಪಸಂಖ್ಯಾತ ಮುಸ್ಲಿಮರು ಒಲವು ವ್ಯಕ್ತಪಡಿಸುತ್ತಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ನಾಪಂಡ ಮುತ್ತಪ್ಪ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಕೊಡಗು ಜಿಲ್ಲೆಯ ಮುಸ್ಲಿಮರು ಈ ಬಾರಿ ಪ್ರಾದೇಶಿಕ ಪಕ್ಷಕ್ಕೆ ಮತ ಚಲಾಯಿಸುವ ವಿಶ್ವಾಸವಿದೆ. ಜೆಡಿಎಸ್ ಪಕ್ಷ ಮಾತ್ರ ಕೊಡಗಿನಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನ ಮಾನ ನೀಡಿದ್ದು, ವಿರಾಜಪೇಟೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದೇವೆ. ಕಾಂಗ್ರೆಸ್ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಅಲ್ಪಸಂಖ್ಯಾತರು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net