

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಆಡಳಿತಾವಧಿ ಅಲ್ಪಸಂಖ್ಯಾತರಿಗೆ ಅತ್ಯಂತ ಖುಷಿ ತಂದಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನೀಲ ಥಾಮಸ್ ಹೇಳಿದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಭಾರತದ ಆರ್ಥಿಕತೆಯನ್ನು 5 ನೇ ಸ್ಥಾನಕ್ಕೆ ತಂದಿದ್ದಾರೆ. ಈಗ ಮುಂದಿನ 5 ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 3ನೇ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
2047 ರ ವೇಳೆಗೆ ಭಾರತದ 100ನೇ ಸ್ವಾತಂತ್ರೊೃೀತ್ಸವ ವರ್ಷಾಚರಣೆ ಸಂದರ್ಭದಲ್ಲಿ ಭಾರತ ವಿಶ್ವಗುರು ಆಗಲಿದೆ. ಅದರಲ್ಲಿ ಮುಸ್ಲಿಂಮರು ಕ್ರೈಸ್ತರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಕೊಡುಗೆ ಇರಲಿದೆ ಎಂದರು.
ಬಿಜೆಪಿ ಕೇವಲ ಹಿಂದುಗಳ ಪಕ್ಷವಲ್ಲ. ಅಲ್ಪಸಂಖ್ಯಾತರು ಕೂಡ ಪ್ರಧಾನಿ ಮೋದಿ ಜಾರಿಗೊಳಿಸಿದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಎಲ್ಲ ಅಲ್ಪಸಂಖ್ಯಾತರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿದ್ದಾರೆ. ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗಲಿದೆ. ನಾವು ಕೂಡ ಪ್ರಧಾನಿಯಾಗಿ ಮೋದಿ ಅವರನ್ನೇ ನೋಡಬಯಸುತ್ತಿದ್ದೇವೆಂದು ತಿಳಿಸಿದರು.
ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೀತಲಕುಮಾರ ಓಗಿ, ಮಜರ ಇನಾಮದಾರ, ಸೈಯ್ಯದ ನಿಡೋಣಿ, ಅಬ್ದುಲ್ ಸತ್ತಾರ ಮತ್ತಿತರರಿದ್ದರು.