

ಮೈಸೂರು: ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಸೈಯದ್ ಸಲಾಂ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಪ್ರಶಿಕ್ಷಣ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅಲ್ಪಸಂಖ್ಯಾತರಿಗೆ ಯಾವುದೇ ಕೊರತೆಯಾಗದ ರೀತಿ ನೋಡಿಕೊಂಡಿವೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಲ್ಪಸಂಖ್ಯಾತರರ ಅಭಿವೃದ್ಧಿಗೆ ರೂಪಿಸಿರುವ ಯೋಜನೆಗಳನ್ನು ಮತ್ತು ಜಾರಿ ಮಾಡಿರುವ ಕಾರ್ಯಕ್ರಮಗಳನ್ನು ಅಲ್ಪಸಂಖ್ಯಾತರಿಗೆ ತಿಳಿಸುವುದು ಮತ್ತು ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇರುವ ಯೋಜನೆಗಳು ಸದ್ಬಳಕೆ ಆಗಬೇಕು. ಎರಡು ದಿನಗಳ ಕಾಲ ನಡೆಯುವ ಈ ಪ್ರಶಿಕ್ಷಣ ಶಿಬಿರದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ವ್ಯಕ್ತತ್ವ ವಿಕಸನ ಮತ್ತು ಆನ್‌ಲೈನ್ ಬಳಕೆ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಶಿಬಿರಕ್ಕೆ ಚಾಲನೆ ನೀಡಿದರು. ಸಂಸದ ಪ್ರತಾಪ್ ಸಿಂಹ, ರಾಜ್ಯ ಉಪಾಧ್ಯಕ್ಷರಾದ ರವಿಕುಮಾರ್, ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ರೂಪಾ, ನಗರಾಧ್ಯಕ್ಷ ಶ್ರೀವತ್ಸ, ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಪದಾಧಿಕಾರಿಗಳಾದ ಡಾ.ಮೋಸಿನ್, ನೂರ್‌ಪಾಷ, ನಯಾಝ್ ಅಹಮದ್, ಡಾ.ಅನಿಲ್ ಥಾಮಸ್ ಇತರರಿದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ‘ಭಾಜಪ ಬೆಳೆದು ಬಂದ ದಾರಿ’ ಕುರಿತು ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಂ.ಬಿ.ಭಾನುಪ್ರಕಾಶ್, ‘ಸಂಘಟನೆ, ಸಂಚಲನೆ ಮತ್ತು ಕಾರ್ಯ ವಿಸ್ತಾರ’ ಕುರಿತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ವಿ. ರಾಜೇಶ್, ‘ಸಾಮಾಜಿಕ ಜಾಲತಾಣದ ಮಹತ್ವ’ ಕುರಿತು ಸಾಮಾಜಿಕ ಜಾಲತಾಣ ಸಂಚಾಲಕ ಸಂತೋಷ್ ಅಕ್ಕಿ, ‘ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸಾಧನೆಗಳು’ ವಿಷಯ ಕುರಿತು ರಾಷ್ಟ್ರೀಯ ಆರ್ಥಿಕ ಸೆಲ್ನ ಸಹ ಸಂಚಾಲಕ ವಿಶ್ವನಾಥ ಭಟ್, ‘ವ್ಯಕ್ತಿತ್ವ ವಿಕಾಸನ ಹಾಗೂ ಸಂಘಟಿತ ಕಾರ್ಯ’ ವಿಷಯ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಅಲ್ಪಸಂಖ್ಯಾತ ಮೋರ್ಚಾ ಪ್ರಭಾರಿ ರವಿಕುಮಾರ್ ಹಾಗೂ ‘ಇಂದಿನ ರಾಜಕೀಯ ಸ್ಥಿತಿಗತಿಗಳು’ ಕುರಿತು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ವಿಚಾರ ಮಂಡಿಸಿದರು.
ಸೆ.13 ರಂದು ಬೆಳಗ್ಗೆ 10 ಗಂಟೆಗೆ ‘ಸಾವರ್ಕರ್‌ರವರ ವಿಚಾರಧಾರೆಗಳು’ ವಿಷಯ ಕುರಿತು ಇಲವಾಲ ವೆಂಕಟರಾಮ್ ವಿಚಾರ ಮಂಡಿಸಲಿದ್ದಾರೆ. ಬಳಿಕ ‘ಭಾರತದ ಸಂವಿಧಾನ’ ವಿಷಯ ಕುರಿತು ವಕೀಲ ವೇಣುಗೋಪಾಲ್, ‘ಚುನಾವಣೆ ನಿರ್ವಹಣೆ’ ವಿಷಯ ಕುರಿತು ರಾಜ್ಯ ಪ್ರಧಾನಕಾರ್ಯದರ್ಶಿ ಸಿದ್ದರಾಜು ವಿಚಾರ ಮಂಡಿಸಲಿದ್ದಾರೆ. ಬಳಿಕ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.