ಕಾಲೇಜು ವಿದ್ಯಾರ್ಥಿಗೆ ಚೂರಿಯಿಂದ ಇರಿದ ಅಪ್ರಾಪ್ತರು

stab
Published on

ಮಂಗಳೂರು: ಪದವಿಪೂರ್ವ ಕಾಲೇಜು ವಿದ್ಯಾರ್ಥಿಯೋರ್ವನಿಗೆ ಇನ್ನೊಂದು ಕಾಲೇಜಿನ ವಿದ್ಯಾರ್ಥಿಗಳು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಂತೂರು ಬಳಿ ನಡೆದಿದೆ.


ನಂತೂರು ಬಳಿ ಇರುವ ಪ.ಪೂ. ಕಾಲೇಜಿನ ದ್ವಿತೀಯ ವರ್ಷದ 17 ವರ್ಷದ ವಿದ್ಯಾರ್ಥಿ ಸೆ.15ರಂದು ಸಂಜೆ ಕಾಲೇಜು ಬಿಟ್ಟು ತನ್ನ ಗೆಳೆಯರೊಂದಿಗೆ ನಂತೂರು ಜಂಕ್ಷನ್ ಕಡೆಗೆ ನಡೆದುಕೊಡು ಹೋಗುತ್ತಿದ್ದಾಗ ಮತ್ತೊಂದು ಪ.ಪೂ. ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಬಂದು ಮಾತನಾಡಲು ಇದೆ ಎಂದು ಹೇಳಿ ದೈವಸ್ಥಾನದ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಅವರ ಕಿಸೆಯಲ್ಲಿದ್ದ ಚೂರಿಯಿಂದ ವಿದ್ಯಾರ್ಥಿಯ ಹೊಟ್ಟೆ, ಎಡಕೈ, ಬೆನ್ನಿಗೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿಯು ಮತ್ತೊಂದು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಗೆಳೆಯನಿಗೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಬೆದರಿಕೆ ಹಾಕಿದ ವಿಷಯವಾಗಿ ಗೆಳೆಯರೊಂದಿಗೆ ಹೋಗಿ ಸಮಾಧಾನ ಮಾಡಿ ಬಂದಿದ್ದ. ಇದರಿಂದ ಕೋಪಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ಇರಿದಿದ್ದಾರೆ ಎಂಬುದಾಗಿ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡವರು ಮತ್ತು ಹಲ್ಲೆ ನಡೆಸಿದವರು 17 ವರ್ಷದವರಾಗಿದ್ದು ಕಾನೂನು ಸಂಕರ್ಷಕ್ಕೊಳಗಾದ ಬಾಲಕರು. ಅವರನ್ನು ಪೋಷಕರೊಂದಿಗೆ ವಿಚಾರಿಸಿ ಕಾನೂನು ಕ್ರಮ ಕೈಗೊಂಡು ಬಾಲ ನ್ಯಾಯ ಮಂಡಳಿಯವರಿಗೆ ಸೂಕ್ತ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net