

ಮಂಡ್ಯ: ಇಲಾಖೆ ವ್ಯಾಪ್ತಿಯ ಕೆರೆಗಳ ಸುತ್ತ ಒತ್ತುವರಿ ತೆರವುಗೊಳಿಸಿ ಅವುಗಳನ್ನು ಸಂರಕ್ಷಿಸಿ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸುವಾಗ ರೈತರು, ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿ ಸ್ಥಳೀಯವಾಗಿ ವಾಸ್ತವ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ 49 ಏತ ನೀರಾವರಿ ಯೋಜನೆಗಳಿವೆ. ಅವುಗಳಲ್ಲಿ 37 ಪೂರ್ಣವಾಗಿ ಕಾರ್ಯನಿರತವಾಗಿರುತ್ತದೆ. 6 ನಿಷ್ಕ್ರಿಯ ಗೊಂಡಿರುತ್ತದೆ. 6 ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದೆ. ಆದ್ದರಿಂದ ನಿಷ್ಕ್ರಿಯಗೊಂಡಿರುವ ಏತ ನೀರಾವರಿಗಳನ್ನು ಸರಿಪಡಿಸಲು ಯೋಜನೆ ರೂಪಿಸಿ. ಸ್ಥಳೀಯವಾಗಿ ನೀರಾವರಿ ಸಹಕಾರ ಸಂಘಗಳನ್ನು ಚುರುಕುಗೊಳಿಸಿ. ರೈತರನ್ನು ಹೆಚ್ಚು ತೊಡಗಿಸಿಕೊಂಡುವ ನೀರನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಿ. ಮಳವಳ್ಳಿ ತಾಲೂಕು ಕೆರೆಗಳ ಅಭಿವೃದ್ಧಿಗೆ ಭೂ ಸ್ವಾಧೀನ ಸೇರಿದಂತೆ ವಿವಿಧ ಕೆಲಸಗಳು ಕೈಗೊಳ್ಳಬೇಕಿದೆ. ತೆರೆದ ಕೆನಲ್ ಕೆಲಸ ನಡೆಸಿದರೆ ಮುಂದೆ ನೀರು ಕೊನೆ ಭಾಗಕ್ಕೆ ತಲುಪಲು ಕಷ್ಟಕರವಾಗುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕೆರೆ ಸಂರಕ್ಷಣೆ ಕುರಿತು ನಿಯಮಿತವಾಗಿ ಸಭೆ ನಡೆಸಿ ಕೆರೆ ಒತ್ತುವರಿ ತೆರವುಗೊಳಿಸಿ ಅವುಗಳ ಸುತ್ತ ಫೆನ್ಸಿಂಗ್ ಮಾಡಲು ಚರ್ಚಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.