

ಬೆಂಗಳೂರು :ಸರ್ಕಾರದ ಸಚಿವಾಲಯದ ಸಿಬ್ಬಂದಿಗೆ ಕಚೇರಿ ಕೆಲಸ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಿನ ಬಿಟ್ಟು ದಿನ ಕೋವಿಡ್ ನಿರ್ವಹಣಾ ಕಾರ್ಯ ನಿರ್ವಹಿಸುವಂತೆ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಜೆ. ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 1 ಕೋಟಿಗೂ ಅಧಿಕ ಜನಸಂಖ್ಯೆಯಿದ್ದು, ಕರೊನಾ ಸೋಂಕು ಪರೀಕ್ಷೆ, ಸೋಂಕಿತರ ಆಸ್ಪತ್ರೆಗೆ ವರ್ಗಾವಣೆ, ಅವರ ಸಂಪರ್ಕದಲ್ಲಿದ್ದವರ ಪತ್ತೆ, ಕ್ವಾರಂಟೈನ್ ಹಾಗೂ ಮನೆ ನಿಗಾ ವಹಿಸುವ ಕಾರ್ಯ ಮಾಡಲು ಎಷ್ಟು ಸಿಬ್ಬಂದಿಯಿದ್ದರೂ ಸಾಲುತ್ತಿಲ್ಲ. ಆದರೆ, ಸಚಿವಾಲಯದ ಅಧಿಕಾರಿ ಹಾಗೂ ನೌಕರರು ಕರ್ತವ್ಯವು ಸಚಿವಾಲಯಕ್ಕೆ ಅವಶ್ಯಕತೆ ಇರುವುದರಿಂದ ಸದರಿ ಕಚೇರಿ ಕೆಲಸಕ್ಕೆ ಹಿಂದುರುಗಿಸಲು ಕುರಿತು ಕೆಡಿಪಿ ಸಭೆಯಲ್ಲಿ ಚರ್ಚಿಸಲಾಗಿದೆ. ಹೀಗಾಗಿ, ಸಚಿವಾಲಯದ ಅಧಿಕಾರಿಗಳನ್ನು ಒಂದು ದಿನ ಕರೊನಾ ನಿಯಂತ್ರಣ ಕರ್ತವ್ಯ, ಮತ್ತೊಂದು ದಿನ ಸಚಿವಾಲಯದ ಕರ್ತವ್ಯ ನಿರ್ವಹಿಸುವಂತೆ ಮುಖ್ಯ ಕಾರ್ಯದರ್ಶಿಗಳು ನಿರ್ದೇಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಚಿವಾಲಯದ ಸಿಬ್ಬಂದಿಗಳು ದಿನ ಬಿಟ್ಟು ದಿನ ಪಾಲಿಕೆ ಸೂಚಿಸಿದ ಕಡೆಗಳಲ್ಲಿ ದಿನ ಬಿಟ್ಟು ದಿನ ಕೋವಿಡ್ ಕಾರ್ಯ ನಿರ್ವಹಿಸಬೇಕು. ಪಾಲಿಕೆ 8 ವಲಯದ ಕೋವಿಡ್ ನಿರ್ವಹಣಾ ಸಂಯೋಜಕ ಅಧಿಕಾರಿಗಳು ಸಚಿವಾಲಯ ಸಿಬ್ಬಂದಿಯನ್ನು ಕೋವಿಡ್ ಕಾರ್ಯಗಳಿಗೆ ನಿಯೋಜನೆ ಮಾಡುವಂತೆ ಪಾಲಿಕೆ ವಿಶೇಷ ಆಯುಕ್ತ ಮಂಜುನಾಥ್ ಸೂಚಿಸಿದ್ದಾರೆ.