ಕುಡಿವ ನೀರಿಗೆ ಆದ್ಯತೆ ನೀಡಬೇಕು

ministre
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬೇಸಿಗೆ ಆರಂಭವಾಗುತ್ತಿದ್ದು, ಜಿಲ್ಲಾಡಳಿತ ಕುಡಿವ ನೀರಿಗೆ ಆದ್ಯತೆ ನೀಡಬೇಕು ಎಲ್ಲಿಯೂ ಕುಡಿಯುವ ನೀರಿಗೆ ಜನರು ಪರದಾಡದಂತೆ ಎಚ್ಚರಿಕೆ ವಹಿಸಬೇಕು ಕಳೆದ ನಾಲ್ಕೈದು ವರ್ಷದ ಅಂಕಿಅಂಶಗಳನ್ನು ಗುರುತು ಮಾಡಿಕೊಂಡು ಅಗತ್ಯವಿರುವ ಕಡೆ ಕುಡಿವ ನೀರು ಪೂರೈಸಲು ಅಧಿಕಾರಿಗಳು ಸಿದ್ದತೆ ಮಾಡಿಕೊಳ್ಳಬೇಕು ಎಂದುಆಹಾರ ನಾಗರಿಕ ಸರಬರಾಜು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಸೂಚನೆ ನೀಡಿದರು.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ಮುಂಜಾಗ್ರತೆ ವಹಿಸಬೇಕು, ಅದೇ ರೀತಿ ಎಲ್ಲಿ ಕುಡಿವ ನೀರಿಗೆ ತೊಂದರೆ ಎದುರಾಗುತ್ತದೆ ಎಂಬುದನ್ನು ಮೊದಲೇ ಗುರುತಿಸಿ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಿದ್ದು, ಈ ಸಂಬಂಧ ಅಧಿಕಾರಿಗಳು ಸಭೆ ನಡೆಸಬೇಕು. ಹಣದ ಕೊರತೆಯಿಲ್ಲ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಿ ವಿನಾಕಾರಣ ಕರ್ತವ್ಯದಲ್ಲಿ ಲೋಪ ಕಾಣಬಾರದು ಎಂದು ಎಚ್ಚರಿಕೆ ನೀಡಿದರು. ಸಹಾಯವಾಣಿ ಸ್ಥಾಪಿಸಿ ಜನರಿಂದ ಬರುವ ಕರೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸವಾಗಬೇಕು, ಹಣದ ಕೊರತೆ ಇದೆ ತಾಂತ್ರಿಕ ಸಮಸ್ಯೆ ಇದೆ ಎಂದು ಕಾರಣಗಳನ್ನು ನೀಡದೆ ಈ ಬೇಸಿಗೆ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ರವಾನಿಸಿದರು.

ಜಾನುವಾರು ಮೇವಿಗೆ ಗಮನವಿರಲಿ: ಕಳೆದ ಬಾರಿ ಉತ್ತಮ ಮಳೆಯಾಗಿದ್ದು ಜಾನುವಾರು ಮೇವಿಗೆ ಕೊರತೆಯಾಗುವ ಸಂದರ್ಭ ಕಡಿಮೆ ಎನ್ನಬಹುದಾದರೂ ಅಧಿಕಾರಿಗಳು ಜಾನುವಾರುಗಳ ಮೇವಿಗೆ ಆದ್ಯತೆ ನೀಡಬೇಕು, ಕಳೆದ ಬಾರಿ ಮೇವಿನ ಕಿಟ್‌ಗಳನ್ನು ವಿತರಿಸುವ ಮೂಲಕ ಜಾನುವಾರು ಮೇವಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿತ್ತು ಎಂದು ತಿಳಿಸಿದರು. ಇದರ ಜತೆಗೆ ಜಾನುವಾರುಗಳಿಗೆ ಬೇಸಿಗೆಯಲ್ಲಿ ಬಾಧಿಸುವ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಲಸಿಕೆ ಸೇರಿ ಇನ್ನಿತರ ಕ್ರಮಗಳ ಬಗ್ಗೆ ಜಿಲ್ಲಾ ಪಶು ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ನಿರ್ದೇಶನ ನೀಡಿದರು.

ಜಿಲ್ಲೆ ಪ್ರಥಮ ಸ್ಥಾನ: ಪೋಡಿ ಅಭಿಯಾನದಲ್ಲಿ ಗ್ರಾಮಾಂತರ ಜಿಲ್ಲೆ ಪ್ರಥಮ ಸ್ಥಾನದಲ್ಲಿದಿರುವುದು ಸಂತಸದ ವಿಷಯವಾಗಿದೆ ಹಾಗೆಯೇ ಮುಂದಿನ ದಿನಗಳಲ್ಲೂ ಪ್ರಥಮ ಸ್ಥಾನ ಕಾಯ್ದುಕೊಳ್ಳುವುದರೊಂದಿಗೆ ರಾಜ್ಯದ ಮೊದಲ ಪೋಡಿಮುಕ್ತ ಜಿಲ್ಲೆಯಾಗುವಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು. ಗ್ರಾಮೀಣ ರಸ್ತೆಗಳು, ರೈತರ ಜಮೀನುಗಳಿಗೆ ರಸ್ತೆ, ಸ್ಮಶಾನದ ರಸ್ತೆಗಳ ಒದಗಿಸುವ ಸಂಬಂಧ ವಾರದಲ್ಲಿ ಒಂದು ದಿನ ಅಥವಾ ಒಂದು ಮಧ್ಯಾಹ್ನ ಈ ಬಗೆಗೆ ಅಧಿಕಾರಿಗಳ ಸಭೆ ನಡೆಸಬೇಕು ಈ ಮೂಲಕ ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಬಹುದು ಎಂದು ಹೇಳಿದರು.

ಕೆರೆ ಅಭಿವೃದ್ಧಿಗೆ ಸಕಾಲ: ಬೇಸಿಗೆ ಆರಂಭವಾಗಿರುವುದರಿಂದ ಮುಂದಿನ ಮಳೆಗಾಲದಲ್ಲಿ ಉತ್ತಮ ಜೀವಜಲ ಕಾಣಲು ಕೆರೆಗಳ ಅಭಿವೃದ್ಧಿಗೆ ಇದು ಸಕಾಲವಾಗಿದೆ ಎಂದು ಸಚಿವರು ತಿಳಿಸಿದರು. ಜಿಲ್ಲೆಯ ಹಲವು ಕೆರೆಗಳಲ್ಲಿ ಮಳೆಯಿಲ್ಲದ ಕಾರಣ ಮರ ಗಿಡಗಳು ಬೆಳೆದಿದ್ದು ಅವುಗಳ ತೆರವುಗೊಳಿಸಬೇಕು, ಹೂಳು ತುಂಬಿರುವ ಕೆರೆಗಳ ಹೂಳು ತೆಗೆಯುವ ಕಾರ್ಯವಾಗಬೇಕು ಜಲಮೂಲಗಳ ರಕ್ಷಣೆಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚು ಕಾಳಜಿವಹಿಸಬೇಕು ಎಂದು ಸೂಚಿಸಿದರು.ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಿವೇಶನ ರಹಿತರಿಗೆ ಮಾರ್ಚ್ ಅಂತ್ಯದೊಳಗಾಗಿ ಗರಿಷ್ಟ ಪ್ರಮಾಣದ ನಿವೇಶನಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲೆಯಲ್ಲಿ 20 ಸಾವಿರದಷ್ಟು ವಸತಿ ರಹಿತರು ನಿವೇಶನಗಳಿಗೆ ಅರ್ಜಿ ಸಲ್ಲಿಸಿದ್ದು, ಆದ್ಯತೆಯ ಮೇರೆಗೆ ನಿವೇಶನ ಹಂಚಲು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net