

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಪತ್ನಿ ಪಾರ್ವತಿ, ಪುತ್ರ ನಿತೀನ್ ವೆಂಕಟೇಶ್ ಹಾಗೂ ಕುಟುಂಬಸ್ಥರೊಂದಿಗೆ ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಬೆಳಗ್ಗೆ 9.30ರಲ್ಲಿ ದೇಗುಲಕ್ಕೆ ಭೇಟಿ ನೀಡಿದ ಸಚಿವರನ್ನು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರು ವಾದ್ಯಮೇಳದೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಮೊದಲಿಗೆ ಗಣಪತಿ ಗುಡಿಯ ದೇವರ ದರ್ಶನ ಪಡೆದ ಸಚಿವರು, ಕುಟುಂಬಸ್ಥರೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಗೂ ಧೂಪ ಹಾಕಿ ದೇವರ ದರ್ಶನ ಪಡೆದರು. ಅರ್ಚಕರು ಮಂತ್ರಗಳನ್ನು ಪಠಿಸುವುದರ ಮೂಲಕ ಪೂಜೆ ಸಲ್ಲಿಸಿದರು. ಬಳಿಕ ಸಚಿವರಿಗೆ ಹಾಗೂ ಕುಟುಂಬಸ್ಥರಿಗೆ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಬಳಿಕ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಬಗ್ಗೆ ಕಾರ್ಯದರ್ಶಿ ಎ.ಈ ರಘು ಅವರಿಂದ ಮಾಹಿತಿ ಪಡೆದು ಮಾತನಾಡಿದ ಸಚಿವರು, ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿರುವ ವಿಷಯಗಳು ಹಾಗೂ ಅನುಮೋದನೆ ಪಡೆದುಕೊಂಡಿರುವ ಕಾಮಗಾರಿಗಳ ಬಗ್ಗೆ ಪರಿಶೀಲಿಸಲು ಮುಂದಿನ ತಿಂಗಳು ಸಭೆ ನಡೆಸಲಾಗುವುದು. ಆದ್ದರಿಂದ ಈ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.
ಭಕ್ತರು ಸುವ್ಯವಸ್ಥಿತವಾಗಿ ದೇವರ ದರ್ಶನ ಪಡೆಯಲು ಪ್ರಾಧಿಕಾರದ ವತಿಯಿಂದ ಪ್ರಗತಿಯಲ್ಲಿರುವ ಸರತಿ ಸಾಲಿನ ಸಂಕೀರ್ಣ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜತೆಗೆ ಆಗಸ್ಟ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಿ ಭಕ್ತರ ಸೇವೆಗೆ ನೀಡಬೇಕು. ಹಾಗೆಯೇ 90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಸಾದ ಸ್ವೀಕರಿಸುವ ಸುಸಜ್ಜಿತ ದಾಸೋಹ ಭವನ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇನ್ನು ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ನೀಡಿರುವ ಪೌರಕಾರ್ಮಿಕರ ಮನೆ ನಿರ್ಮಾಣ ಸಂಬಂಧ ಅಂದಾಜು ಪಟ್ಟಿ ತಯಾರಿಸಿ ವರದಿ ನೀಡುವಂತೆ ಸಚಿವರು ಸೂಚಿಸಿದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಜಿ.ಎಲ್ ಚಂದ್ರಶೇಖರ್, ಎಎಸ್ಪಿ ಶಶಿಧರ್, ಡಿವೈಎಸ್ಪಿ ಧರ್ಮೇಂದ್ರ, ಪಿಡಬ್ಲುೃಡಿ ಎಇಇ ಚಿನ್ನಣ್ಣ ಹಾಗೂ ಇನ್ನಿತರರು ಇದ್ದರು.