

ಶಿವಮೊಗ್ಗ: ಕುರುಬರ ಸಂಘದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಶನಿವಾರ ನಗರ ಪಾಲಿಕೆಗೆ ದಿಢೀರ್ ಭೇಟಿ ನೀಡಿದರು. ಸಾರ್ವಜನಿಕರ ದೂರು ಆಲಿಸಿ ಕರ್ತವ್ಯಲೋಪ ಎಸಗಿದ ಆರೋಪದಡಿ ಆರೋಗ್ಯ ನಿರೀಕ್ಷಕ ವೇಣುಗೋಪಾಲ್ ಅವರನ್ನು ಅಮಾನತು ಮಾಡುವಂತೆ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಅವರಿಗೆ ಸೂಚಿಸಿದರು.
ಆದರ್ಶ ನಗರದ ನಾಗರಿಕರೊಬ್ಬರು ಚರಂಡಿ ಸ್ವಚ್ಛತೆ ಇಲ್ಲ ಎಂದು ದೂರು ನೀಡಿ 25 ದಿನಗಳಾಗಿತ್ತು. ಆದರೆ ಪಾಲಿಕೆಯಿಂದ ಯಾರೂ ಸ್ಥಳಕ್ಕೆ ಬಂದಿಲ್ಲ. ಸಮಸ್ಯೆ ಪರಿಹಾರವಾಗಿಲ್ಲ ಎಂದು ಸಚಿವರ ಬಳಿ ದೂರು ಹೇಳಿಕೊಂಡರು. ಇದರಿಂದ ಕೆರಳಿದ ಸಚಿವರು ವೇಣುಗೋಪಾಲ್ ಅವರನ್ನು ಸಸ್ಪೆಂಡ್ ಮಾಡಿ. ಅದರ ಆದೇಶ ಪ್ರತಿಯನ್ನು ನನಗೆ ವಾಟ್ಸಪ್ ಮಾಡಿ ಎಂದು ಆಯುಕ್ತರಿಗೆ ಮೌಖಿಕ ಆದೇಶ ನೀಡಿದರು.
ನೇರವಾಗಿ ಕಂದಾಯ ವಿಭಾಗಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿದ್ದ ಸಾರ್ವಜನಿಕರನ್ನು ಮಾತನಾಡಿಸಿದರು. ಯಾವಾಗ ಅರ್ಜಿ ನೀಡಿದ್ದೀರಿ? ಎಷ್ಟು ತಿಂಗಳಿನಿಂದ ಓಡಾಡುತ್ತಿದ್ದೀರಿ? ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು. ಸಾರ್ವಜನಿಕರ ದೂರು ಕೇಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಚಿವರಿಗೆ ಸಮಜಾಯಿಷಿ ನೀಡಲು ಅಧಿಕಾರಿಗಳು ಹರಸಹಾಸ ಪಡುವಂತಾಯಿತು.
ಆಯುಕ್ತರೊಂದಿಗೆ ಟಪಾಲು ವಿಭಾಗಕ್ಕೆ ಮತ್ತು ದೂರು ಸ್ವೀಕಾರ ವಿಭಾಗಕ್ಕೆ ಭೇಟಿ ನೀಡಿದ ಸಚಿವರು ಅಲ್ಲೇ ಕುಳಿತು ಲೆಡ್ಜರ್ ಪರಿಶೀಲನೆ ನಡೆಸಿ ದೂರು ನೀಡಿದವರಿಗೆ ತಾವೇ ಖುದ್ದಾಗಿ ದೂರವಾಣಿ ಮುಖಾಂತರ ಸಂಪರ್ಕಿಸಿ ಕೆಲಸವಾಗಿದೆಯೇ ಎಂದು ಮಾಹಿತಿ ಪಡೆದರು.
ಕೆಲ ನಾಗರಿಕರು ಪಾಲಿಕೆಯಲ್ಲಿ ಖಾತೆ ಮಾಡಿಕೊಡಲು ಮತ್ತು ಇ-ಸ್ವತ್ತು ಮಾಡಲು ಆಗುತ್ತಿರುವ ವಿಳಂಬದ ಬಗ್ಗೆ ಗಮನಸೆಳೆದರು. ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆ ಸ್ವಚ್ಛತೆಯಿಲ್ಲ. ಪಾಲಿಕೆ ಆವರಣವೇ ಗಬ್ಬೆದ್ದು ಹೋಗಿದೆ. ಅಧಿಕಾರಿಗಳಾರೂ ಕೆಲಸ ಮಾಡುತ್ತಿಲ್ಲ ಎಂದು ನಾಗರಿಕರು ಆಯುಕ್ತರನ್ನು ಸೇರಿದಂತೆ ಎಲ್ಲರ ವಿರುದ್ಧ ಕಿಡಿಕಾರಿದರು.
ಎಲ್ಲದರ ಮಾಹಿತಿ ಪಡೆದ ಸಚಿವರು ನಾನು ಇನ್ನೊಮ್ಮೆ ಬರುತ್ತೇನೆ. ಅಷ್ಟರೊಳಗೆ ವ್ಯವಸ್ಥೆ ಸರಿಪಡಿಸಬೇಕು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೇ ಕರ್ತವ್ಯ ಲೋಪ ಎಸಗುವ ಸಿಬ್ಬಂದಿ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.