ನಾಡಕಚೇರಿಗೆ ಸಚಿವರ ದಿಢೀರ್ ಭೇಟಿ

6 anr 2
ಆಯನೂರು ನೂತನ ನಾಡಕಚೇರಿ ಕಟ್ಟಡ ಪರಿಶೀಲನೆಗೆ ಆಗಮಿಸಿದ ಸಚಿವ ಕೃಷ್ಣಬೈರೇಗೌಡ.
Published on

ಆಯನೂರು: ಕಂದಾಯ ಸಚಿವ ಕೃಷ್ಣಭೈರೇಗೌಡ ಆಯನೂರು ನಾಡಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೆಕಾರ್ಡ್ ರೂಮ್, ಉಪತಹಸೀಲ್ದಾರ್ ಕೊಠಡಿ, ಗ್ರಾಮಲೆಕ್ಕಾಧಿಕಾರಿಗಳು, ಜನರು ಬಂದು ಕುಳಿತುಕೊಳ್ಳುವ ವ್ಯವಸ್ಥೆ, ಶೌಚಗೃಹ ಪರಿಶೀಲನೆ ನಡೆಸಿ ಅಲ್ಲಿರುವ ಸಮಸ್ಯೆಗಳನ್ನು ಅಧಿಕಾರಿಗಳಿಂದ ಕೇಳಿ ಸರಿಪಡಿಸಿಕೊಡುವ ಭರವಸೆ ನೀಡಿದರು.ನಾಡಕಚೇರಿಯಲ್ಲಿ ಆಗುತ್ತಿರುವ ಕೆಲಸ ಕಾರ್ಯಗಳು, ಸಕಾಲ, ಸೇವಾಸಿಂಧು, ಗ್ರಾಮಒನ್ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ದಿನಕ್ಕೆ ಎಷ್ಟು ಅರ್ಜಿಗಳು ಬರುತ್ತವೆ. ಅದರಲ್ಲಿ ಆಗುತ್ತಿರುವ ತೊಂದರೆಗಳು, ಗ್ರಾಮಲೆಕ್ಕಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆಯೇ? ಗ್ರಾಮಲೆಕ್ಕಾಧಿಕಾರಿಗಳು ಮಾಡಬೇಕಾದ ಕೆಲಸಗಳ ಪಟ್ಟಿ ಇದೆಯೇ? ಅನೇಕ ವಿಷಯಗಳ ಬಗ್ಗೆ ಕೂಲಂಕುಷವಾಗಿ ಅಧಿಕಾರಿಗಳೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಒಂದು ತಾಸು ಚರ್ಚೆ ನಡೆಸಿದರು. ಆಧಾರ್ ಕಾರ್ಡ್‌ನಲ್ಲಿ ಮತ್ತು ಜಾತಿ ಆದಾಯ ಪ್ರಮಾಣಪತ್ರದಲ್ಲಿ ವ್ಯತ್ಯಾಸಕ್ಕೆ ನಾಡಕಚೇರಿಯಲ್ಲಿ ಅರ್ಜಿ ಹಾಕಿದಾಗ 21 ದಿನಗಳು ಸಮಯ ಬೇಕಾಗುತ್ತದೆ. ಕೇಂದ್ರದಲ್ಲಿಯೇ ಜನನ ಹಾಗೂ ಮರಣ ಪ್ರಮಾಣಪತ್ರದಲ್ಲಿ ಹೆಸರು ತಪ್ಪಾಗಿ ನಮೂದಿಸಿ ತಿದ್ದುಪಡಿಗೆ ಹೋದರೆ ಕೋರ್ಟ್‌ಗೆ ಹೋಗುವಂತೆ ಸೂಚಿಸುತ್ತಾರೆ. ಜತೆಗೆ ನಾಡಕಚೇರಿಯಲ್ಲಿ ಅರ್ಜಿ ಹಾಕಿದಾಗ 21 ದಿನಗಳು ಸಮಯ ಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು, ಇತರ ಉದ್ದೇಶಕ್ಕೆ ತೊಂದರೆಯಾಗಿದೆ. ಆಗುತ್ತಿರುವ ತೊಂದರೆಯನ್ನು ನಿವಾರಿಸಿಕೊಡಬೇಕೆಂದು ಗ್ರಾಮಸ್ಥ ಉದಯ ಶೆಟ್ಟಿ ಸಚಿವರ ಗಮನ ಸೆಳೆದರು. ನಾಡಕಚೇರಿ ಆರಂಭವಾಗಿ 10 ವರ್ಷಗಳೇ ಕಳೆದಿವೆ. ನಾಡಕಚೇರಿಯಲ್ಲಿ ಉಪತಹಸೀಲ್ದಾರ್, ರಾಜಸ್ವ ನಿರೀಕ್ಷಕರು, ಕೇಸ್ ವರ್ಕರ್, ಗ್ರೂಪ್ ‘ಡಿ’ ನೌಕರ ಹಾಗೂ 4 ಜನ ಗ್ರಾಮಲೆಕ್ಕಾಧಿಕಾರಿಗಳ ಹುದ್ದೆಗಳಿವೆ. ಆದರೆ ಗ್ರಾಮ ಲೆಕ್ಕಾಧಿಕಾರಿಗಳ ಸಂಬಳ ಬಿಟ್ಟು ಇತರರಿಗೆ ಸಂಬಳ ಆಗುತ್ತೀಲ್ಲ. ಎಲ್ಲರೂ ಪ್ರಭಾರಿಗಳಾಗಿ ಕೆಲಸ ಮಾಡುತ್ತೀದ್ದಾರೆ. ಇವರು ಎರಡೆರಡು ಕಡೆ ಕೆಲಸ ಮಾಡುವಂತ ಪರಿಸ್ಥಿತಿ ಇದೆ. ನಾಡಕಚೇರಿಗೆ ಕಾಯಂ ಹುದ್ದೆಗಳ ಮಾಡಿಕೊಡಿ ಎಂದು ಪತ್ರಕರ್ತರು ಕೇಳಿದಾಗ, ಸಚಿವರು ಶೀಘ್ರದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ತಿಳಿಸಿದರು. ಆಯನೂರು ನಾಡಕಚೇರಿಗೆ ಕಾಯಂ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದ್ದೇನೆ. ಸಮಸ್ಯೆ ತೀವ್ರತೆ ಗೊತ್ತಾಗಿದೆ. ತಪ್ಪು ಕಂಡು ಬಂದರೆ ಜುಲ್ಮಾನೆ ಹಾಕಿ, ಸಾರ್ವಜನಿಕರಿಗೆ ಅಲೆದಾಡಿಸಬೇಡಿ. ನಾಡಕಚೇರಿಯನ್ನು ಹೊಸ ಕಟ್ಟಡಕ್ಕೆ ವರ್ಗಾವಣೆ ಮಾಡಲಾಗುವುದು ಎಂದರು.ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಎಸಿ ಸತ್ಯನಾರಾಯಣ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಕಟಾರಿಯಾ, ತಹಸೀಲ್ದಾರ್ ನಾಗರಾಜ್, ಕೆ.ಸುರೇಶ್, ಶ್ರೀನಿವಾಸ್ ಕರಿಯಣ್ಣ, ಎಚ್.ಸಿ.ಯೋಗೇಶ್, ನಿರಂಜನ, ನಿಜು, ಹಾರೂನ್ ರಶೀದ್, ಶಿವು ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net