

ಕೋಲಾರ : ಬಗರ್ ಹುಕುಂ ಹಾಗೂ ಭೂ ಮಂಜೂರಾತಿ ಸೇರಿ ಹಲವು ಕೆಲಸ ನಿರ್ವಹಣೆಯಲ್ಲಿ ಅಸಡ್ಡೆ ತೋರಿರುವ ಆರೋಪದಡಿ ಮಾಲೂರು ತಹಸೀಲ್ದಾರ್ ರಮೇಶ್ಗೆ ನೋಟಿಸ್ ನೀಡಲು ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.
ಕಂದಾಯ ಇಲಾಖೆ ಪ್ರಗತಿ ಕುರಿತು ಪರಿಶೀಲನೆ ನಡೆಸಲು ಜಿಲ್ಲೆಯ ತಹಸೀಲ್ದಾರ್ಗಳ ಜತೆ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್ ಹಮ್ಮಿಕೊಂಡಿದ್ದರು.
ಸಭೆಗೆ ತಹಸೀಲ್ದಾರ್ ರಮೇಶ್ ಅರ್ಧ ಗಂಟೆ ತಡವಾಗಿ ಆಗಮಿಸಿದರಾದರೂ ಪ್ರಗತಿ ಕುರಿತು ಮಾಹಿತಿ ನೀಡಲು ತಡಬಡಿಸಿದರು. ಇದು ಸಚಿವರ ಕೋಪಕ್ಕೆ ಕಾರಣವಾಯಿತು.
ಕರ್ತವ್ಯದಲ್ಲಿ ಅಸಡ್ಡೆ ಹಾಗೂ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ರಮೇಶ್ ಅವರಿಗೆ ನೋಟಿಸ್ ನೀಡಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಅವರಿಗೆ ಸೂಚಿಸಿದರು.
ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಆಗಿದೆಯಾ?, ಎಷ್ಟು ಜನಕ್ಕೆ ಭೂ ಮಂಜೂರು ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು. ಇದಕ್ಕೆ 51 ಅರ್ಜಿ ವಿಲೇವಾರಿ ಮಾಡಿದ್ದು, ವಿಎ ಜತೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಉತ್ತರಿಸಿದರು.
ಮತ್ತಷ್ಟು ಗರಂ ಆದ ಕೃಷ್ಣಬೈರೇಗೌಡ, ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೀರಾ ಅಥವಾ ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೀರಾ. ಸಭೆಯ ನೋಟಿಸ್ ನೀಡಿದರೆ ಹಾಜರಾಗಲು ಆಗುವುದಿಲ್ಲವೇ ಯಾರ ಹತ್ತಿರ ಅಧಿಕ ಪ್ರಸಂಗಿತನ ಮಾಡುತ್ತೀರಾ. ಒಳ್ಳೆ ಮಾತಿಗೆ ಮರ್ಯಾದೆ ಇಲ್ವ?. ಒಂದೂವರೆ ತಿಂಗಳಲ್ಲಿ ಮೂರು ಬಾರಿ ಮಾತನಾಡಿದ್ದೇನೆ, ಸ್ಥಳ ಪರಿಶೀಲನೆ ಬಿಟ್ಟರೆ ಬೇರೇನು ಕೆಲಸ ಆಗಿಲ್ವ ಎಂದು ತರಾಟೆಗೆ ತೆಗೆದುಕೊಂಡರು.
ಕೋಲಾರಕ್ಕೆ ಬಂದು ಏನು ಕೆಲಸ ಮುಗಿಸಬೇಕು ಎಂದು ಹೇಳಿ ಬಂದಿದ್ದೇನೆ, ಕಳೆದ ಸಭೆಯಲ್ಲೂ ಏನು ಸೂಚನೆ ನೀಡಿದ್ದೇ ಎಂಬ ಜ್ಞಾಪಕ ಇದೆಯಾ ಎಂದು ಪ್ರಶ್ನಿಸಿದರು.
ವಯಸ್ಸಿಗೆ ಗೌರವ ನೀಡಿದರೆ ತೆಗೆದುಕೊಳ್ಳುವುದು ಗೊತ್ತಿಲ್ಲ. ಯಾರು ಇವರಿಗೆ ಆಯುಕ್ತರು, ಕಾರ್ಯದರ್ಶಿ, ಕಳೆದ ಸಭೆಗಳ ಹಾಗೂ ಈ ಸಭೆಯ ವಿಷಯಗಳನ್ನು ಕಾರ್ಯಗತಗೊಳಿಸಲಾಗಿಲ್ಲ. ನೋಟಿಸ್ ನೀಡಿ ಕ್ರಮಕೈಗೊಳ್ಳಿ. ವಿಡಿಯೋ ಕಾನ್ಫರೆನ್ಸ್ ಮಾಡಲು ನನಗೇನು ಬೇರೆ ಕೆಲಸವಿಲ್ವ ಎಂದು ಕಿಡಿಕಾರಿದರು.