

ಬೆಳಗಾವಿ: ಕಾರ್ಮಿಕ ಸಚಿವರಾದ ಬಳಿಕ ಮೊದಲ ಬಾರಿ ಸೋಮವಾರ ನಗರಕ್ಕೆ ಆಗಮಿಸಿದ ಶಿವರಾಮ ಹೆಬ್ಬಾರ ಅವರಿಗೆ ಸಾಲು ಸಾಲಾಗಿ ನಡೆದ ಪ್ರತಿಭಟನೆಗಳ ಬಿಸಿ ತಟ್ಟಿತು.
ಬೆಳಗಾವಿಯಿಂದ ಬೆಂಗಳೂರಿಗೆ ಸಕ್ಕರೆ ಆಯುಕ್ತರ ಕಚೇರಿ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸಚಿವರನ್ನು ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ಬೆಳಗಾವಿ ಸಕ್ಕರೆ ಆಯುಕ್ತರ ಕಚೇರಿ ಸ್ಥಳಾಂತರಿಸದಿದ್ದರೆ ಉತ್ತರ ಕರ್ನಾಟಕದಾದ್ಯಂತ ಹೋರಾಟಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡರಾದ ಸಿದಗೌಡ ಮೋದಗಿ, ಪ್ರಕಾಶ ನಾಯ್ಕ ಇತರರಿದ್ದರು.
ಕಾರ್ಮಿಕ ಮಹಿಳೆಯರ ಮುತ್ತಿಗೆ: ರೈತರ ಮನವಿ ಸ್ವೀಕರಿಸಿ ಮುಂದೆ ಸಾಗಿದ ಹೆಬ್ಬಾರ ಅವರಿಗೆ ಗೃಹ ಕಾರ್ಮಿಕ ಮಹಿಳೆಯರು ವಿವಿಧ ಬೇಡಿಕೆ ಈಡೇರಿಸುವಂತೆ ಮುತ್ತಿಗೆ ಹಾಕಿದರು. 10 ವರ್ಷಗಳಿಂದ ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್ ಮಾಡಿಕೊಂಡಿದ್ದೇವೆ. ಲಾಕ್‌ಡೌನ್ ಪರಿಣಾಮದಿಂದ ಗೃಹ ಕಾರ್ಮಿಕರು ಬಹಳ ಸಂಕಷ್ಟದಲ್ಲಿದ್ದಾರೆ. ಗೃಹ ಕಾರ್ಮಿಕರಿಗೂ ಸರ್ಕಾರ ಸಹಾಯಧನ ಘೋಷಿಸಬೇಕು ಎಂದು ಒತ್ತಾಯಿಸಿದರು. ರಾಜಶ್ರೀ ದೊಡ್ಡಮನಿ, ದೀಪಾ ಶಿವರಾಯಕರ, ಗೀತಾ ಕಾರ್ತಿಕರ, ಗಂಗಮ್ಮ ಅನಂತಪುರ ಇತರರಿದ್ದರು.
ದಲಿತ ಸಂಘರ್ಷ ಸಮಿತಿ: ನ್ಯಾಯಾಲಯ ಆದೇಶದ ಅನ್ವಯ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಸ್ಪರ್ಷ ಜಾತಿಗಳಾದ ಬಂಜಾರ, ಲಮಾಣಿ, ಭೋವಿ, ಕೊರಮ, ಕೊರಜ ಸಮುದಾಯಗಳ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟಿಸಿ, ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬಂಜಾರ, ಲಮಾಣಿ, ಭೋವಿ ಜಾತಿಗಳನ್ನು ಪರಿಶಿಷ್ಟ ಸಮುದಾಯ ಜಾತಿಗಳ ಪಟ್ಟಿಯಿಂದ ಹೊರ ತೆಗೆಯಬೇಕೆಂದು ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಆದೇಶಿಸಿದೆ. ಈ ಆದೇಶವನ್ನು ಅನುಷ್ಠಾನಗೊಳಿಸಿ ಅರ್ಹ ಜಾತಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಕಲ್ಲಪ್ಪ ಕಾಂಬಳೆ, ದಾದಾಸಾಹೇಬ ಮಾನೆ, ಎಂ.ಆರ್. ಯಾದವ್, ಬಸವರಾಜ ತಳವಾರ ಇತರರಿದ್ದರು.
ಪರಿಹಾರ ಘೋಷಿಸಿ: ಕರೊನಾ ವೈರಸ್ ಭೀತಿಯಲ್ಲಿ ವಿಧಿಸಿದ ಲಾಕ್‌ಡೌನ್‌ನಿಂದ ಕ್ಷೌರಿಕರು ಹಾಗೂ ಮಡಿವಾಳ ಸಮುದಾಯದವರಿಗೆ ಆರ್ಥಿಕ ನಷ್ಟದಿಂದ ಜೀವನ ನಡೆಸಲು ದುಸ್ತರವಾಗಿದೆ. ಸರ್ಕಾರ ಕೂಡಲೇ ಐದು ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಮರಾಠಾ ರಾಜಕ್ ಸಮಾಜದವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಸಚಿವ ಶಿವರಾಮ ಹೆಬ್ಬಾರ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದಂತೆ ವಿವಿಧ ಸಂಘಟನೆಗಳ ಮುಖಂಡರು ಜಮಾಯಿಸಿದರು. ಈ ವೇಳೆ ಎಲ್ಲರೂ ದೈಹಿಕ ಅಂತರ ಕಾಪಾಡುವುದನ್ನು ಮರೆತಂತಿತ್ತು. ಬೆಳಗ್ಗೆ 11ರಿಂದಲೇ ಪ್ರತಿಭಟನಾಕಾರರು ಜಮಾಯಿಸಿದ್ದರು. ಪೊಲೀಸರು ಅಸಹಾಯಕರಂತೆ ನಿಂತಿದ್ದರು. ಸಚಿವರೂ ದೈಹಿಕ ಅಂತರದ ಬಗ್ಗೆ ಗಮನ ಕೊಡದೆ ಅಧಿಕಾರಿ ಸಮೂಹದೊಂದಿಗೆ ಮುಂದೆ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು.